ಮಡಿಕೇರಿ, ಸೆ. ೨೮: ನಗರದ ಪ್ರಮುಖ ಪ್ರವಾಸಿ ತಾಣವಾಗಿರುವ ರಾಜಾಸೀಟ್ ಉದ್ಯಾನವನದ ಎದುರು ತಲೆಯೆತ್ತಿದ್ದ ಗೂಡಂಗಡಿಗಳು ತೆರವುಗೊಂಡಿದ್ದು, ಉದ್ಯಾನದೆದುರು ಅಂದವಾಗಿ ಕಾಣುತ್ತಿದೆ.

ರಾಜಾಸೀಟ್ ಬಳಿ ಪಾನಿಪೂರಿ, ಚುರುಮುರಿ ಇನ್ನಿತರ ಆಟಿಕೆ ಸಾಮಗ್ರಿಗಳ ಮಾರಾಟ ಮಾಡುವ ಗೂಡಂಗಡಿಗಳಿಗೆ ಪಕ್ಕದ ಪುಟಾಣಿ ರೈಲು ಇದ್ದ ಜಾಗದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಕೆಲವರು ಅಲ್ಲಿಂದ ಸ್ಥಳಾಂತರಗೊAಡು ಉದ್ಯಾನದ ಪ್ರವೇಶದ್ವಾರದಲ್ಲಿಯೇ ಅಂಗಡಿ ಹಾಕಿದ್ದರು. ಇದರಿಂದಾಗಿ ಉದ್ಯಾನ ಮರೆಯಾದಂತಾಗಿ ಉದ್ಯಾನದ ಅಂದ ಕೆಡುವಂತಾಗಿತ್ತು. ಅಲ್ಲದೆ ಪ್ರವೇಶ ದ್ವಾರದೆದುರು ಕಸದ ರಾಶಿಯಿಂದ ಕೊಳಕಾಗಿತ್ತು. ಈ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ನಗರಸಭಾ ಆಯುಕ್ತರು ಅಂಗಡಿಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದರು.

ಸೂಚನೆಯಂತೆ ನಿನ್ನೆ ಸಂಜೆ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ತೆರವುಗೊಳಿಸುವಂತೆ ಸೂಚಿಸಿದ್ದರು. ಆದರೆ ತಯಾರಿಸಿಟ್ಟುಕೊಂಡಿದ್ದ ತಿನಿಸು, ಸಾಮಗ್ರಿಗಳು ವ್ಯಾಪಾರವಿಲ್ಲದೆ ಹಾಳಾಗುತ್ತವೆ. ಮಂಗಳವಾರ ನಾವುಗಳೇ ತೆರವುಗೊಳಿಸುವದಾಗಿ ವ್ಯಾಪಾರಿಗಳು ಭಿನ್ನವಿಸಿಕೊಂಡಿದ್ದರಿAದ ಅಧಿಕಾರಿಗಳು ಸೂಚನೆ ನೀಡಿ ಹಿಂತಿರುಗಿದ್ದರು.

ಇAದು ಬೆಳಿಗ್ಗೆ ವ್ಯಾಪಾರಿಗಳೇ ತಮ್ಮ ಪ್ರವೇಶದ್ವಾರದಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಿ ಈ ಹಿಂದೆ ಇದ್ದ ಸ್ಥಳಕ್ಕೆ ಸ್ಥಳಾಂತರಗೊAಡಿದ್ದಾರೆ. ಇದರಿಂದಾಗಿ ಪ್ರವೇಶದ್ವಾರದಲ್ಲಿ ಸ್ವಚ್ಛತೆಯೊಂದಿಗೆ ಉದ್ಯಾನದ ಅಂದವೂ ಹೆಚ್ಚಿದೆ. - ಟಿ.ಜಿ. ಸತೀಶ್