ಮಡಿಕೇರಿ, ಸೆ. ೨೮: ಜೆ.ಡಿ.ಎಸ್. ಪಕ್ಷದ ಮುಖಂಡ ಹಾಗೂ ಪತ್ರಕರ್ತನೋರ್ವ ನಿಯಮಗಳನ್ನು ಗಾಳಿಗೆ ತೂರಿ ಅನಧಿಕೃತವಾಗಿ ಮನೆ ನಿರ್ಮಾಣ ಮಾಡಿಕೊಂಡಿದ್ದ ಆರೋಪದಡಿ ನಗರಸಭೆ ಪೌರಾಯುಕ್ತ ರಾಮದಾಸ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಸ್ಟೋನ್ಹಿಲ್ ಬಳಿಯಲ್ಲಿ ಸರಕಾರಿ ಜಾಗ ಕಬಳಿಕೆ ಮಾಡಿಕೊಂಡಿದ್ದಲ್ಲದೆ ಅದೇ ಜಾಗದಲ್ಲಿ ಮನೆಗಳನ್ನು ನಿರ್ಮಿಸಲು ಈರ್ವರು ಮುಂದಾಗಿದ್ದರು. ಒಂದು ಹಂತದಲ್ಲಿ ೨ ಮನೆಗಳು ನಿರ್ಮಾಣವಾಗಿವೆ. ಜೆ.ಡಿ.ಎಸ್.ಮುಖಂಡ ಸುನಿಲ್ ಹಾಗೂ ನ್ಯೂಸ್ ೧೮ ಖಾಸಗಿ ವಾಹಿನಿಯ ವರದಿಗಾರ ರವಿಕುಮಾರ್ ಜಾಗ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ಪೌರಾಯುಕ್ತ ರಾಮದಾಸ್ ಸ್ಥಳಕ್ಕೆ ಭೇಟಿ ನೀಡಿದರು. ಮೊದಲು ಮನೆಗಳು ನಿರ್ಮಾಣವಾಗಿರುವ ಜಾಗಕ್ಕೆ ತೆರಳಿದ ರಾಮದಾಸ್,
(ಮೊದಲ ಪುಟದಿಂದ) ಅನಧಿಕೃತವಾಗಿ ಮನೆ ಹೇಗೆ? ನಿರ್ಮಾಣ ಮಾಡಿದ್ದೀರ ಎಂದು ಪ್ರಶ್ನಿಸಿದರು. ಯಾವುದೇ ದಾಖಲೆ ಸಲ್ಲಿಸದೆ, ನಿಯಮಬಾಹಿರವಾಗಿ ಮನೆ ನಿರ್ಮಾಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಮನೆ ನಿರ್ಮಾಣ
ಸ್ಟೋನ್ಹಿಲ್ ಬಳಿಯಲ್ಲಿ ಪತ್ರಕರ್ತ ರವಿಕುಮಾರ್ ಹಾಗೂ ಜೆಡಿಎಸ್ ಮುಖಂಡ ಸುನಿಲ್ ಈಗಾಗಲೇ ಅಡಿಪಾಯ ಹಾಕಿ ಮನೆಯನ್ನು ಒಂದು ಹಂತದಲ್ಲಿ ನಿರ್ಮಾಣ ಮಾಡಿದ್ದಾರೆ. ಮುಂಭಾಗ ಸುನಿಲ್ ಹಾಗೂ ಆ ಮನೆಯ ಹಿಂಭಾಗದಲ್ಲಿ ರವಿ ಅವರ ಮನೆ ಇವೆ.
೨ ಮನೆಗಳ ಮಧ್ಯದಲ್ಲಿ ಮತ್ತೊಂದು ಪುಟ್ಟ ಮನೆಯನ್ನು ಸುನಿಲ್ ನಿರ್ಮಾಣ ಮಾಡಿ, ಅಲ್ಲಿ ಕುಟುಂಬ ಸಹಿತ ಕೆಲವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಮುಂಭಾಗವೇ ಮನೆಯನ್ನು ನಿರ್ಮಿಸಲು ಹೊರಟಿದ್ದು, ಈಗಾಗಲೇ ಅದಕ್ಕೆ ರೂ. ೩.೫೦ ಲಕ್ಷ ಖರ್ಚಾಗಿದೆ ಎಂದು ತಿಳಿದು ಬಂದಿದೆ.
ಮನೆಗೆ ಮೂಲ ಸೌಲಭ್ಯ
ಅನಧಿಕೃತ ಮನೆಯೊಂದಕ್ಕೆ ವಿದ್ಯುತ್, ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಅನಧಿಕೃತ ಮನೆಗೆ ಹೇಗೆ ಮೂಲಸೌಲಭ್ಯ ನೀಡಿದ್ದಾರೆ ಎಂಬ ಪ್ರಶ್ನೆಯೂ ಇದೀಗ ಮೂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪೌರಾಯುಕ್ತರು, ಈ ಬಗ್ಗೆ ತನಗೆ ಮಾಹಿತಿ ಇಲ್ಲ. ಅಧಿಕಾರಿಗಳೊಂದಿಗೆ ಚರ್ಚಿಸ ಲಾಗುವುದು ಎಂದು ತಿಳಿಸಿದರು.
೩.೫೦ ಎಕರೆ ಜಾಗ ಒತ್ತುವರಿ
ಅನಧಿಕೃತ ಮನೆ ನಿರ್ಮಾಣವಲ್ಲದೆ ೩.೫೦ ಎಕರೆಯಷ್ಟು ಸರಕಾರಿ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಪೌರಾಯುಕ್ತ ರಾಮದಾಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಡಿಕೇರಿ ನಗರದಲ್ಲಿ ಸರಕಾರಿ ಜಾಗಗಳ ಒತ್ತುವರಿ, ಅನಧಿಕೃತ ಮನೆ ನಿರ್ಮಾಣದ ಬಗ್ಗೆ ಅನೇಕ ದೂರುಗಳು ಸಾರ್ವಜನಿಕರಿಂದ ಬರುತ್ತಿದ್ದ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದಾಗ ಮೂರು ಮನೆಗಳು ಅಕ್ರಮವಾಗಿ ನಿರ್ಮಾಣವಾಗಿದೆ. ರಸ್ತೆ ಬದಿಯ ೩.೫೦ ಎಕರೆ ಜಾಗದಲ್ಲಿ ಬೇಲಿ ಹಾಕಿಕೊಂಡು ಬಾಳೆ ಸೇರಿದಂತೆ ಇನ್ನಿತರ ಗಿಡಗಳನ್ನು ನೆಟ್ಟಿದ್ದಾರೆ. ಒತ್ತುವರಿ ಮಾಡಿಕೊಂಡವರು ಯಾರು ಎಂದು ತಿಳಿದು ಬಂದಿಲ್ಲ. ವಾರದೊಳಗೆ ಕಚೇರಿಗೆ ಆಗಮಿಸಿ ದಾಖಲಾತಿ ಸಲ್ಲಿಸದಿದ್ದಲ್ಲಿ ಸರಕಾರದ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದರು.
ಸ್ಥಳಕ್ಕೆ ಬಾರದ ಪತ್ರಕರ್ತ
ಪೌರಾಯುಕ್ತರು ಸ್ಥಳಕ್ಕೆ ಆಗಮಿಸಿದರು ಕೂಡ ಜಾಗ ಒತ್ತುವರಿ ಮಾಡಿಕೊಂಡ ಆರೋಪ ಹೊತ್ತಿರುವ ಪತ್ರಕರ್ತ ರವಿಕುಮಾರ್ ಮಾತ್ರ ಬರಲಿಲ್ಲ. ಸುನಿಲ್ ಸ್ಥಳದಲ್ಲಿದ್ದು, ಪೌರಾಯುಕ್ತರಿಗೆ ಮಾಹಿತಿ ನೀಡಿದರು. ಜಾಗದ ಮಂಜೂರಾತಿಗಾಗಿ ೯೪ಸಿ ಅಡಿಯಲ್ಲಿ ಅರ್ಜಿ ಹಾಕಲಾಗಿದೆ. ಇದು ಪ್ರಕ್ರಿಯೆಯಲ್ಲಿದೆ. ಆದರೆ, ಇನ್ನೂ ಜಾಗ ಮಂಜೂರಾಗಿಲ್ಲ. ಪತ್ರಕರ್ತ ರವಿ ಅವರು ಯಾವುದೇ ಅರ್ಜಿಯನ್ನು ಸಲ್ಲಿಸಿಲ್ಲ ಎಂದು ‘ಶಕ್ತಿ’ಯೊಂದಿಗೆ ಹೇಳಿಕೊಂಡರು.
ರವಿಕುಮಾರ್ ಸ್ಥಳಕ್ಕಾಗಮಿಸದ ಹಿನ್ನೆಲೆ ಪೌರಾಯುಕ್ತರು ಅವರಿಗೆ ಕರೆ ಮಾಡಿದಾಗ, ಸೋಮವಾರದೊಳಗೆ ಅಗತ್ಯ ದಾಖಲೆ ಸಲ್ಲಿಸುತ್ತೇನೆ ಎಂದು ಹೇಳಿದರು. ಆದಲ್ಲದೆ ರವಿ ಮೂಲತಃ ಮಡಿಕೇರಿಯವರಲ್ಲ, ಇಲ್ಲಿನ ದಾಖಲೆಗಳಿಲ್ಲ ಎಂದು ತಿಳಿದು ಬಂದಿದೆ.