ಮಡಿಕೇರಿ, ಸೆ. ೨೯: ಭಾರತದ ಸ್ಕಾಟ್ಲ್ಯಾಂಡ್, ದಕ್ಷಿಣ ಭಾರತದ ಕಾಶ್ಮೀರ, ಪ್ರವಾಸಿಗರ ಸ್ವರ್ಗ, ಜೀವನದಿ ಕಾವೇರಿಯ ತವರೂರು ಕೊಡಗು. ದಿನನಿತ್ಯ ಪ್ರವಾಸಿಗರು, ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಇಲ್ಲಿಯ ಪ್ರಕೃತಿ ಸೌಂದರ್ಯವನ್ನು ಆನಂದಿಸುತ್ತಾರೆ.
ಆದರೆ ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕೋವಿಡ್‌ನಿಂದ, ಪ್ರವಾಸೋದ್ಯಮವನ್ನು ನಂಬಿ ಬದುಕುವವರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಕೋವಿಡ್ ಲಾಕ್‌ಡೌನ್, ವಾರಾಂತ್ಯ ಕರ್ಫ್ಯೂ, ಹಲವು ನಿರ್ಬಂಧಗಳು ಪ್ರವಾಸೋದ್ಯಮದ ಮೇಲೆ ದೊಡ್ಡ ಹೊಡೆತ ಬಿದ್ದಿದೆ.
ಇದೀಗ ಕೋವಿಡ್ ಲಾಕ್‌ಡೌನ್, ವಾರಾಂತ್ಯ ಕರ್ಫ್ಯೂ ತೆರವುಗೊಂಡಿದ್ದು, ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಜಿಲ್ಲೆಯ ಪ್ರವಾಸೋದ್ಯಮ ಪುನಶ್ಚೇತನಗೊಳ್ಳುವ ವಿಶ್ವಾಸದಲ್ಲಿದೆ.
ಪ್ರವಾಸೋದ್ಯಮಕ್ಕೆ ವಿರೋಧ ಬೇಕೇ...!!??
ಕಾಫಿ, ಕರಿಮೆಣಸು ಮೂಲಕ ವಿಶ್ವದ ಗಮನಸೆಳೆದಿರುವ ಪುಟ್ಟ ಜಿಲ್ಲೆ ಕೊಡಗು. ಜಿಲ್ಲೆಯ ಹಚ್ಚಹಸಿರಿನಿಂದ ತುಂಬಿರುವ ಪ್ರಕೃತಿ ಹಾಗೂ ಪ್ರವಾಸೋದ್ಯಮದ ಮೂಲಕವು ಇಡೀ ವಿಶ್ವವನ್ನು ಕೊಡಗಿನತ್ತ ಗಮನಸೆಳೆದಿದೆ. ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಕೆಲವೊಂದು ವಿರೋಧಗಳು ಕೇಳಿಬರುತ್ತಿದೆ.
ಪ್ರವಾಸೋದ್ಯಮದಿಂದ ಜಿಲ್ಲೆಯ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ ಎಂದು, ಕಳೆದ ಅನೇಕ ವರ್ಷಗಳಿಂದ ಕೇಳಿಬರುತ್ತಿರುವ ಮಾತುಗಳು. ಒಂದು ವೇಳೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಬಂದ್ ಮಾಡಿದರೆ?
ಪ್ರವಾಸೋದ್ಯಮವನ್ನೇ ನಂಬಿ ಬದುಕುವ ಅದೆಷ್ಟೋ ಕುಟುಂಬಗಳ ಪರಿಸ್ಥಿತಿ ದೇವನೇ ಬಲ್ಲ. ಪ್ರವಾಸೋದ್ಯಮವನ್ನು ಬಂದ್ ಮಾಡಬೇಕು ಎಂಬ ಮಾತುಗಳು ಯಾಕೆ ಎಂಬ ಪ್ರಶ್ನೆ ಕೇವಲ ಕೊಠಡಿಗಳನ್ನು ಒದಗಿಸುವವರ ಪ್ರಶ್ನೆ ಅಲ್ಲ. ಪ್ರವಾಸೋದ್ಯಮ ಅವಲಂಬಿತರಾದ ಟ್ಯಾಕ್ಸಿ, ಜೀಪು, ಹೊಟೇಲ್, ಅಂಗಡಿ, ವ್ಯಾಪಾರಿ, ವಾಣಿಜ್ಯೋದ್ಯಮಿಗಳು ಕೂಡಾ.
ಸಿಂಗಾಪುರ, ಮಲೇಶಿಯಾ ಹಾಗೂ ಅರಬ್ ದೇಶಗಳು ಪ್ರವಾಸೋದ್ಯಮದ ಮೂಲಕ ತಮ್ಮ ಆರ್ಥಿಕ ಶಕ್ತಿಯನ್ನು ವೃದ್ಧಿಸುತ್ತಿವೆ. ಕುಸಿದಿರುವ ಆರ್ಥಿಕ ಪರಿಸ್ಥಿತಿಯನ್ನು ಮೇಲೆತ್ತಲು ಪ್ರವಾಸೋದ್ಯಮ ಸಹಕಾರಿಯಾಗಿದೆ. ಕೊಡಗು ಜಿಲ್ಲೆಯ ಮೂಲ ಸಂಸ್ಕೃತಿಗೆ ಧಕ್ಕೆಯಾಗದ ಹಾಗೂ ಚ್ಯುತಿ ಬಾರದ ರೀತಿಯಲ್ಲಿ ಜಿಲ್ಲೆಯ ಪ್ರವಾಸೋದ್ಯಮ ನಡೆಯಬೇಕಾಗಿದೆ.
ಜಿಲ್ಲೆಯಲ್ಲಿ ಪ್ರವಾಸಿತಾಣಗಳ ಮೂಲ ಸೌಕರ್ಯಕ್ಕೆ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ಮೊದಲ ಆದ್ಯತೆ ಕಲ್ಪಿಸಬೇಕಾಗಿದೆ. ಕೊಡಗಿನ ಬಹುತೇಕ ಪ್ರವಾಸಿತಾಣಗಳು ಸರಿಯಾದ ನಿರ್ವಹಣೆಯಿಲ್ಲದೆ,ತನ್ನ ಗತವೈಭವವನ್ನು ಕಳೆದಕೊಳ್ಳುತ್ತಿವೆ. ಪ್ರವಾಸಿತಾಣಗಳಲ್ಲಿ ಯಾವುದೇ ಅಪಾಯಗಳು ಸಂಭವಿಸದೆ, ಪ್ರವಾಸಿಗರ ರಕ್ಷಣೆಗೆ ಕೂಡ ಆದ್ಯತೆ ನೀಡಬೇಕಾಗಿದೆ.
ರಾಷ್ಟç ಮತ್ತು ಅಂರ‍್ರಾಷ್ಟಿçÃಯ ಪ್ರವಾಸಿಗರನ್ನು ಸೆಳೆಯಲು, ರಾಜ್ಯದಲ್ಲಿನ ಪ್ರವಾಸಿ ತಾಣಗಳಲ್ಲಿ "ಟೆಲಿ ಟೂರಿಸಂ" ಅಳವಡಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಪಟ್ಟಿಯಲ್ಲಿ ಕೊಡಗು ಕೂಡ ಸ್ಥಾನ ಪಡೆದಿದೆ.
ಕೆಲವೊಂದು ಹೋಂಸ್ಟೇಗಳಲ್ಲಿ ನಡೆಯುತ್ತಿರುವ ಅನಧಿಕೃತ ಚಟುವಟಿಕೆಗಳಿಂದ, ಹೋಂಸ್ಟೇಗಳನ್ನು ಬೇರೆ ದೃಷ್ಟಿಯಲ್ಲಿ ಜನರು ನೋಡುತ್ತಿದ್ದಾರೆ. ಜಿಲ್ಲೆಯಲ್ಲಿ ಈಗಲೂ ಸಹಾ ಅನಧಿಕೃತ ಹೋಂಸ್ಟೇಗಳು ಎಗ್ಗಿಲ್ಲದೇ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿರುವ ಅನಧಿಕೃತ ಹೋಂಸ್ಟೇಗಳಿಗೆ ಜಿಲ್ಲಾಡಳಿತ ಕಡಿವಾಣ ಹಾಕಬೇಕಾಗಿದೆ.
- ಕೆ.ಎಂ. ಇಸ್ಮಾಯಿಲ್ ಕಂಡಕರೆ