ಮಡಿಕೇರಿ, ಸೆ. ೨೮: ದಿನದಿಂದ ದಿನಕ್ಕೆ ಏರುತ್ತಿರುವ ಜನ- ವಾಹನ ದಟ್ಟಣೆಯಿಂದಾಗಿ ಸಂಚಾರ ಅವ್ಯವಸ್ಥೆಯೊಂದಿಗೆ ಕಿಷ್ಕಿಂಧೆಯಾಗುತ್ತಿರುವ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಸಮರ್ಪಕ ವಾಹನ ನಿಲುಗಡೆಯೊಂದಿಗೆ ಕೆಲವೊಂದು ಮಾರ್ಪಾಡುಗಳನ್ನು ತರಲು ಮಡಿಕೇರಿ ನಗರಸಭೆ ಮುಂದಾಗಿದೆ.

ಮೊದಲೇ ಗುಡ್ಡಗಾಡು ಪ್ರದೇಶವಾಗಿರುವ ಮಡಿಕೇರಿಯಲ್ಲಿ ಜನಸಂಖ್ಯೆಯೊAದಿಗೆ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರೊಂದಿಗೆ ಕಟ್ಟಡ, ಅಂಗಡಿ - ಮಳಿಗೆಗಳು ತಲೆ ಎತ್ತುತ್ತಿವೆ. ಜೊತೆಗೆ ಪ್ರವಾಸಿಗರ ಆಗಮನವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವಾಹನಗಳ ನಿಲುಗಡೆಗೆ ಜಾಗ ಹುಡುಕುವಂತಾಗಿದೆ. ವಾಹನ ನಿಲುಗಡೆಗೆ ಅವಕಾಶವಿರುವೆಡೆಗಳಲ್ಲಿ ಕೆಲವರು ದಿನವಿಡೀ ವಾಹನಗಳನ್ನು ನಿಲ್ಲಿಸುತ್ತಿದ್ದರೆ, ಪ್ರವಾಸಿಗರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವದರಿಂದ ಪಾದಚಾರಿಗಳಿಗೆ, ಸ್ಥಳೀಯರ ವಾಹನ ಸಂಚಾರಕ್ಕೆ ತೀರ ಅಡಚಣೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಈಗಾಗಲೇ ವಾಹನ ನಿಲುಗಡೆ ಮಾಡಲಾಗುತ್ತಿರುವ ಸ್ಥಳಗಳನ್ನು ಅಧಿಕೃತವಾಗಿ ವಾಹನ ನಿಲುಗಡೆ ಪ್ರದೇಶವೆಂದು ಘೋಷಿಸಿ, ಫಲಕಗಳನ್ನು ಅಳವಡಿಸುವದರೊಂದಿಗೆ ನಿಲುಗಡೆ ಶುಲ್ಕ ವಿಧಿಸಲು ನಗರಸಭೆ ಮುಂದಾಗಿದೆ.

(ಮೊದಲ ಪುಟದಿಂದ)

ಟೆAಡರ್ ಆಹ್ವಾನ

ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಅಗಲವಾಗಿರುವ ಹಾಗೂ ಏಕಮುಖ ಸಂಚಾರವಿರುವ ರಸ್ತೆ ಬದಿಗಳಲ್ಲಿ ಸಾಮಾನ್ಯವಾಗಿ ವಾಹನಗಳನ್ನು ನಿಲುಗಡೆಗೊಳಿಸಲಾಗುತ್ತಿದೆ. ಈ ಪೈಕಿ ಕೆಲವೊಂದು ರಸ್ತೆಗಳನ್ನು ಗುರುತಿಸಿ ಅಧಿಕೃತವಾಗಿ ವಾಹನ ನಿಲುಗಡೆ ಪ್ರದೇಶಗಳೆಂದು ನಿಗದಿಪಡಿಸಲು ನಗರಸಭೆ ತೀರ್ಮಾನಿಸಿದೆ. ಈ ಸಂಬAಧ ನಿಲುಗಡೆ ಶುಲ್ಕ ವಸೂಲಾತಿ ಮಾಡಲು ಬಹಿರಂಗ ಹರಾಜಿಗೆ ಟೆಂಡರ್ ಆಹ್ವಾನಿಸಲಾಗಿದೆ. ಅಲ್ಲದೆ ಈ ಸಂಬAಧ ಸಾರ್ವಜನಿಕರಿಂದ, ವ್ಯಾಪಾರಿಗಳಿಂದ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಕೂಡ ಕಲ್ಪಿಸಲಾಗಿದೆ. ತಾ. ೨೯ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ನಿಗದಿಗೊಳಿಸಿದ ಸ್ಥಳಗಳು

ನಾಲ್ಕು ಚಕ್ರ ವಾಹನಗಳನ್ನು ನಿಲ್ಲಿಸಲು ವಿವಿಧ ರಸ್ತೆಗಳಲ್ಲಿ ಸ್ಥಳನಿಗದಿಗೊಳಿಸಲಾಗಿದೆ. ಕಾಲೇಜು ರಸ್ತೆಯ ಜಿಇಸಿ ಮಳಿಗೆಯಿಂದ ಪ್ರಾರಂಭಗೊAಡು ರಾಮಮಂದಿರ ಬಳಿಯ ಮೆಡಿಕಲ್ ಶಾಪ್‌ವರೆಗೆ, ಕಾಲೇಜು ರಸ್ತೆಯ ಅಪ್ಪಚ್ಚಕವಿ ರೈಸ್‌ಮಿಲ್ ಕಡೆಯಿಂದ ತಿರುಗುವ ರಸ್ತೆಯ ನಂತರ ಬದಿಯಿಂದ ಕಾವೇರಿ ಬೇಕರಿವರೆಗೆ, ಎಸ್‌ಬಿಐ ಬ್ಯಾಂಕ್‌ನಿAದ ಇಳಿಯುವ ರಸ್ತೆ ಬದಿ ಹೊಟೇಲ್ ಗ್ರೀನ್‌ವೇ ಕಟ್ಟಡದವರೆಗೆ, ಇಂದಿರಾಗಾAಧಿ ವೃತ್ತದ ಬಳಿಯ ಮುಖ್ಯ ರಸ್ತೆ, ದರ್ಬಾರ್ ಹೊಟೇಲ್ ಕಟ್ಟಡದಿಂದ ಸೀಜನ್ಸ್ ಬಟ್ಟೆ ಅಂಗಡಿವರೆಗೆ, ಹಾಲಿನ ಡೈರಿ ಎದುರುಗಡೆಯಿಂದ ಅಂಚೆ ಇಲಾಖೆ ಮುಂಭಾಗದ ಹಾಪ್‌ಕಾಮ್ಸ್ ಕಟ್ಟಡದವರೆಗೆ, ನಾರ್ತ್ಕೂರ್ಗ್ ಕ್ಲಬ್ ಆಸ್ತಿಯ ಮುಂಭಾಗ ರಸ್ತೆಯ ಮತ್ತೊಂದು ಬದಿ ಮೆಕ್‌ಡೊವೆಲ್ ಕಟ್ಟಡದವರೆಗೆ ಹಾಗೂ ರಾಜಾಸೀಟ್ ರಸ್ತೆ ಬದಿಯಲ್ಲಿ ನಿಲುಗಡೆಗೆ ಸ್ಥಳ ಗುರುತಿಸಲಾಗಿದೆ.

ಶುಲ್ಕ ನಿಗದಿ

ನಗರಸಭೆಯಿಂದ ಗುರುತಿಸಲಾಗಿರುವ ಸ್ಥಳಗಳಲ್ಲಿ ನಿಲುಗಡೆಗೊಳ್ಳುವ ವಾಹನಗಳಿಗೆ ನಿಲುಗಡೆ ಶುಲ್ಕ ನಿಗದಿಪಡಿಸಲಾಗಿದೆ. ವಾಹನ ನಿಲ್ಲಿಸಿದ ಪ್ರಾರಂಭದ ೧ ಗಂಟೆ ಅವಧಿಯವರೆಗೆ ರೂ. ೧೦ ಶುಲ್ಕ ನಿಗದಿಪಡಿಸಲಾಗಿದೆ. ಒಂದು ಗಂಟೆಯ ಬಳಿಕ ಸಂಜೆವರೆಗೆ ಎಷ್ಟು ಸಮಯವಾದರೂ ಹೆಚ್ಚುವರಿ ರೂ. ೨೦ ಶುಲ್ಕ ಪಾವತಿಸಬೇಕಾಗಿದೆ. ಈ ಮೊದಲು ೧ ಗಂಟೆ ಅವಧಿಗೆ ರೂ. ೧೦ ಹಾಗೂ ನಂತರದ ಪ್ರತಿ ಒಂದು ಗಂಟೆಗೆ ರೂ. ೨೦ ರಂತೆ ಶುಲ್ಕ ಪಾವತಿಗೆ ನಗರಸಭೆ ಪ್ರಕಟಣೆ ಹೊರಡಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಇದೀಗ ಮಾರ್ಪಾಡು ಮಾಡಲಾಗಿದೆ. ಇದರಿಂದಾಗಿ ದಿನವಿಡೀ ತಮ್ಮ ಅಂಗಡಿಗಳ ಎದುರು ವಾಹನಗಳನ್ನು ನಿಲ್ಲಿಸುವ ವ್ಯಾಪಾರಸ್ಥರಿಗೆ ಅನುಕೂಲವಾದಂತಾಗಿದೆ.

ಶುಲ್ಕ ವಿಧಿಸುವಂತಿಲ್ಲ

ವಾಸ್ತವವಾಗಿ ರಸ್ತೆ ಬದಿಗಳಲ್ಲಿ ನಿಲ್ಲಿಸಲ್ಪಡುವ ವಾಹನಗಳಿಗೆ ಶುಲ್ಕ ವಿಧಿಸುವಂತಿಲ್ಲ. ಸಂಬAಧಿಸಿದ ಸ್ಥಳೀಯ ಸಂಸ್ಥೆಗಳು ವಾಹನ ನಿಲುಗಡೆಗೆ ಪ್ರತ್ಯೇಕ ನಿಲುಗಡೆ ಪ್ರದೇಶ ವ್ಯವಸ್ಥೆ ಮಾಡಿ ಶುಲ್ಕ ವಿಧಿಸಬಹುದಾಗಿದೆ. ಪ್ರವಾಸಿ ತಾಣಗಳ ಬಳಿ ಕೂಡ ರಸ್ತೆ ಬದಿಯಲ್ಲಿ ನಿಲ್ಲಿಸುವ ವಾಹನಗಳಿಗೆ ಶುಲ್ಕ ವಿಧಿಸುವಂತಿಲ್ಲ. ರಾಜಾಸೀಟು ಬಳಿ ಹೆಚ್ಚೆಂದರೆ ೨೫ ಲಘು ವಾಹನಗಳನ್ನು ನಿಲ್ಲಿಸಬಹುದು. ಆದರೆ ಶುಲ್ಕ ಸಂಗ್ರಹಿಸುವವರು ಅಕಾಶವಾಣಿ ರಸ್ತೆ, ರೇಸ್‌ಕೋರ್ಸ್ ರಸ್ತೆಗಳಲ್ಲಿ ನಿಲ್ಲಿಸುವ ವಾಹನಗಳಿಂದಲೂ ಅಕ್ರಮವಾಗಿ ಶುಲ್ಕ ವಸೂಲಾತಿ ಮಾಡುತ್ತಾರೆ. ಇದು ಕಾನೂನು ಬಾಹಿರವಾಗಿದೆ. ಪ್ರವಾಸಿ ತಾಣದ ಬಳಿ ವಾಹನ ನಿಲುಗಡೆಗೆ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಬೇಕಾಗಿರುವುದು ಸ್ಥಳೀಯ ಸಂಸ್ಥೆಗಳ ಕರ್ತವ್ಯವಾಗಿದೆ.

ಜಾಗ ಎಲ್ಲಿದೆ..?

ಈಗಾಗಲೇ ನಗರಸಭೆ ಹೊರಡಿಸಿರುವ ಪ್ರಕಟಣೆಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತಗೊಂಡಿದೆ. ಈ ಹಿಂದೆ ಕಾಲೇಜು ರಸ್ತೆಯ ಒಂದು ಬದಿಯಲ್ಲಿ (ಹಿಂದಿನ ಸಿವಿಸಿ ಪಾರ್ಸೆಲ್ ಸರ್ವಿಸ್) ಇರುವ ನಗರಸಭೆಗೆ ಸೇರಿದ ಜಾಗದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವ ಬಗ್ಗೆ ನಿರ್ಣಯ ಕೂಡ ಕೈಗೊಳ್ಳಲಾಗಿತ್ತು. ನಂತರದಲ್ಲಿ ಆ ಪ್ರಸ್ತಾಪ ನೆನೆಗುದಿಗೆ ಬಿದ್ದಿತು. ಇದೀಗ ಆ ಜಾಗದಲ್ಲಿ ಕಟ್ಟಡಗಳು ತಲೆಯೆತ್ತಿವೆ.

ನಗರಸಭೆಗೆ ಸೇರಿದ ಜಾಗ ಎಲ್ಲಿದೆ ಎಂದು ಹುಡುಕಬೇಕಾಗಿದೆ. ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುತ್ತಾ ಅಡಚಣೆ ಉಂಟುಮಾಡುತ್ತಿರುವದನ್ನು ನಿಯಂತ್ರಣ ಮಾಡಬೇಕೇ ಹೊರತು ರಸ್ತೆ ಬದಿ ನಿಲ್ಲಿಸುವ ವಾಹನಗಳಿಗೆ ಶುಲ್ಕ ವಿದಿಸುವುದು ಸರಿಯಾದ ಕ್ರಮವಲ್ಲ ಎಂಬದು ಸಾರ್ವಜನಿಕರ ಅಭಿಪ್ರಾಯವಾಗಿದೆ.

- ಸಂತೋಷ್