ಸುಂಟಿಕೊಪ್ಪ, ಸೆ. ೨೮: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಅವರು ಅಭಿವೃದ್ಧಿ ಕಾರ್ಯಗಳಿಗೆ ಕಾಳಜಿ ವಹಿಸದೆ ಪಂಚಾಯಿತಿಯ ಸಾಮಾನ್ಯ ಸಭೆಗೆ ಗೈರಾಗಿ ಅಗೌರವ ತೋರಿದ್ದಾರೆ. ಅಧ್ಯಕ್ಷರು ರಾಜೀನಾಮೆ ನೀಡಬೇಕೆಂದು ಸದಸ್ಯ ಪಿ.ಆರ್. ಸುನಿಲ್ ಕುಮಾರ್ ಆಗ್ರಹಿಸಿದರು. ಪಂಚಾಯಿತಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯನ್ನು ಅಧ್ಯಕ್ಷರು ಕರೆದಿದ್ದರು. ಆದರೆ, ಅವರು ಭಾರತ್ ಬಂದ್ ಹಿನ್ನೆಲೆ ಪ್ರತಿಭಟನೆಗೆ ತೆರಳಿದ್ದು, ಉಪಾಧ್ಯಕ್ಷರು ಕೂಡ ಸಭೆಗೆ ಗೈರಾಗಿದ್ದಾರೆ. ಸಭೆಗೆ ತೆರಳಿದಾಗ ಇಬ್ಬರು ಇರಲಿಲ್ಲ. ಊರಿನ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದ ಅಧ್ಯಕ್ಷರು ರಾಜೀನಾಮೆ ನೀಡುವುದು ಒಳಿತು ಎಂದ ಅವರು, ಗ್ರಾಮದಲ್ಲಿ ಹಲವು ಸಮಸ್ಯೆಗಳಿವೆ. ಇಲಿ ಜ್ವರ ಕಾಣಿಸಿಕೊಂಡಿದೆ. ಈ ಕಾರಣಕ್ಕಾಗಿ ಸುಂಟಿಕೊಪ್ಪಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಅಧ್ಯಕ್ಷೆ ಶಿವಮ್ಮ ಮಾತ್ರ ಬರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮದ ಅಭಿವೃದ್ಧಿ ಬಗ್ಗೆ ಅಧ್ಯಕ್ಷೆಗೆ ಕಾಳಜಿ ಇಲ್ಲ ಎಂದು ದೂರಿದರು. ರಾಜೀನಾಮೆ ನೀಡಬೇಕು ಎಂದು ಸದಸ್ಯರುಗಳಾದ ಪಿ.ಆರ್. ಸುನಿಲ್ಕುಮಾರ್, ಬಿ.ಎಂ.ಸುರೇಶ್, ಸೋಮನಾಥ್, ಮಂಜುಳ, ಶಾಂತಿ, ಗೀತಾ ಹಾಗೂ ವಸಂತಿ ಆಗ್ರಹಿಸಿದರು.