ಶನಿವಾರಸಂತೆ, ಸೆ. ೨೮: ಒಕ್ಕೂಟದ ಸದಸ್ಯರು ಪ್ರತಿ ಕಾರ್ಯಕ್ಷೇತ್ರದಲ್ಲಿ ಒಕ್ಕೂಟವನ್ನು ಬಲವರ್ಧನೆಗೊಳಿಸುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಯೋಗೀಶ್ ಅಭಿಪ್ರಾಯಪಟ್ಟರು.
ಪಟ್ಟಣದ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ನ ವಲಯ ಮಟ್ಟದ ಪದಾಧಿಕಾರಿಗಳ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಜನೆಯ ಕಾರ್ಯಕ್ರಮಗಳು ಹಾಗೂ ಪ್ರಯೋಜನಗಳು ಜನರಿಗೆ ತಲುಪುವ ಬಗ್ಗೆ ಮಾಹಿತಿ ನೀಡಿ, ಪ್ರತಿಯೊಬ್ಬರು ಸಹಕಾರ ನೀಡುವಂತೆ ಕೋರಿದರು.
ಅಧ್ಯಕ್ಷತೆ ವಹಿಸಿದ್ದ ಯೋಜನಾಧಿಕಾರಿ ಸುರೇಂದ್ರಕುಮಾರ್ ಮಾತನಾಡಿ, ಸಂಘದ ಪ್ರತಿಯೊಬ್ಬ ಸದಸ್ಯರು ಯೋಜನೆಯ ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸೇವಾ ಸಿಂಧು ಕೇಂದ್ರದ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳಬೇಕು. ಪ್ರತಿ ಕುಟುಂಬದಲ್ಲಿಯೂ ಸಂಘದ ಮುಖೇನ ಅಭಿವೃದ್ಧಿ ಕಾರ್ಯಗಳಾಗಬೇಕು. ಸೌಲಭ್ಯಗಳು ಜನರಿಗೆ ಶೀಘ್ರ ತಲುಪಿಸಲು ಒಕ್ಕೂಟದ ಪದಾಧಿಕಾರಿಗಳ, ಪ್ರತಿ ಸದಸ್ಯರ ಅವಶ್ಯಕತೆಯ ಅಗತ್ಯವಿದೆ ಎಂದರು.
ವಲಯ ಮೇಲ್ವಿಚಾರಕ ದಯಾನಂದ್, ೧೦ ಒಕ್ಕೂಟಗಳ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳಾದ ಶೋಭಾವತಿ ಹಾಗೂ ಪ್ರಮೀಳಾ ಉಪಸ್ಥಿತರಿದ್ದರು.