ಚೆಟ್ಟಳ್ಳಿ, ಸೆ. ೨೬: ಕಾಫಿ ಗಿಡಗಳ ಎಲೆಯ ಕೆಳಭಾಗದಲ್ಲಿ ಎಳೆ ಚಿಗುರಲ್ಲಿ ಕಾಯಿಯ ತೊಟ್ಟಿನ ಸನಿಹದಲ್ಲಿ ಮುದ್ದೆಯಾಗಿ ಕುಳಿತು ರಸ ಹೀರುತ್ತಾ ಗಿಡಗಳ ಬೆಳೆವಣಿಗೆ ಯನ್ನು ಕುಂಠಿತಗೊಳಿಸುವ ಬೂದಿ ಬಣ್ಣದಂತೆ ಕಾಣುವ ಮಿಲಿಬಗ್ಗ್ ಕೀಟಗಳನ್ನು ತಿನ್ನುವ ಲೆಪ್ಟೊಮ್ಯಾಸ್ಟಿಕ್ಸ್ ಡಕ್ಟಿಲೋಪಿ ಎಂಬ ಸಣ್ಣಗಿನ ಪರಾವಲಂಬಿ ಕೀಟವೊಂದನ್ನು ಅಭಿವೃದ್ಧಿಪಡಿಸುವ ಮೂಲಕ ಚೆಟ್ಟಳ್ಳಿ ಕಾಫಿ ಉಪಸಂಶೋಧನಾ ಕೇಂದ್ರ ಕಾಫಿ ಬೆಳೆಗಾರರಿಗೆ ಸಹಕಾರಿ ಯಾಗಿದೆ. ಬಿಳಿ ಉಣ್ಣೆ ಅಥವಾ ಹಿಟ್ಟು ತಿಗಣೆ ಎಂದು ಕರೆಯಲ್ಪಡುವ ಪಸುಡೊಕೋಕ್ಸಿಡೇ ಎಂಬ ಜಾತಿಗೆ ಸೇರಿದ ಮಿಲಿಬಗ್ಗ್ ಕೀಟ ಇದಾಗಿದ್ದು, ರೋಬಸ್ಟಾ ಹಾಗೂ ಅರೇಬಿಕಾ ಗಿಡಗಳನ್ನು ಕಾಡುವ ಕಾಂಡಕೊರಕ (ಬೋರರ್), ಬೆರಿಬೋರರ್, ರೆಕ್ಕೆಬೋರರ್, ಎಲೆ ಚುಕ್ಕಿರೋಗಗಳ ಜೊತೆಗೆ ಮಿಲಿಬಗ್ಗ್ ಕೀಟವು ಒಂದಾಗಿದೆ. ಬೇಸಿಗೆಯಲ್ಲಿ ಸಂತಾನೋತ್ಪತ್ತಿಯಾಗಿ ಮಳೆಗಾಲ ಬಂತೆAದರೆ ಗಿಡಗಳ ಬೇರಿನಲ್ಲಿ ಅವು ಸೇರಿಬಿಡುತ್ತವೆ. ಕಾಫಿ ಗಿಡಗಳಲ್ಲದೆ ಕರಿಮೆಣಸು ಬಳ್ಳಿ, ಹಣ್ಣಿನಗಿಡ, ಮನೆಸುತ್ತಲ ಹೂ ಗಿಡಗಳಲ್ಲಿ ಕೀಟ ಹೆಚ್ಚಾಗಿ ಕಂಡುಬರುತ್ತದೆ.

ಮಿಲಿಬಗ್ಗ್ ನಿಯಂತ್ರಣಕ್ಕೆ ಹಲವು ಸಿಂಪಡಣಾ ಔಷಧಿಗಳಿದ್ದರೂ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ಸುಮಾರು ೧೫ ವರ್ಷಗಳ ಹಿಂದೆಯೇ ಲೆಪ್ಟೊಮ್ಯಾಸ್ಟಿಕ್ಸ್ ಡಕ್ಟಿಲೋಪಿ ಪರತಂತ್ರ ಕೀಟಗಳನ್ನು ತಂದು ಅಭಿವೃದ್ಧಿಪಡಿಸಲಾಯಿತು. ಹಲವು ವರ್ಷಗಳ ನಂತರ ಕೀಟ ಅಭಿವೃದ್ಧಿಯನ್ನು ಕೈಬಿಡಲಾಗಿತ್ತು. ಇದೀಗ ಕೇರಳದ ಕಾಫಿ ಸಂಶೋಧನಾ ಕೇಂದ್ರದಿAದ ೧೦೦೦ ಕೀಟಗಳನ್ನು ತಂದು ೨೦೨೧ರ ಜನವರಿಯಿಂದ ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪಕೇಂದ್ರದ ಕೀಟ ವಿಭಾಗದ ಪ್ರಯೋಗಾಲಯದ ಗಾಜು ಹಾಗೂ ಬಲೆಯಲ್ಲಿ ಜೋಡಿಸಿದ ಸಣ್ಣಗಿನ ಹುಳಗಳ ಸಂತಾನೋತ್ಪತ್ತಿ ಪೆಟ್ಟಿಗೆಯೊಳಗೆ ಕುಂಬಳಕಾಯಿ ಹಾಗೂ ಆಲುಗೆಡ್ಡೆ ಇಟ್ಟು ಪ್ರತೀ ಪೆಟ್ಟಿಗೆಯಲ್ಲಿ ೧೦೦ ಕೀಟಗಳನ್ನು ಬೆಳೆಸಲಾಗುತ್ತದೆ. ಕೀಟಗಳ ಸಂಖ್ಯೆ ಅಭಿವೃದ್ಧಿಯಾದಂತೆ ಸಣ್ಣಗಿನ ಪಂಪುಗಳ ಮೂಲಕ ಪೈಪುಗಳಲ್ಲಿ ಎಳೆದು ಪ್ಲಾಸ್ಟಿಕ್ ಡಬ್ಬಕ್ಕೆ ತುಂಬಿ ಬೆಳೆಗಾರರಿಗೆ ನೀಡಲಾಗುತ್ತದೆ. ಪ್ರತೀ ೧೦೦೦ ಕೀಟಗಳಿಗೆ ರೂ. ೨೫೦ ರಂತೆ ಮಾರಾಟ ಮಾಡಲಾಗುತ್ತಿದೆ. ಸಂಜೆಯ ತಂಪಗಿನ ಸಮಯದಲ್ಲಿ ಮಿಲಿಬಗ್ಗ್ ಹೆಚ್ಚಾಗಿರುವ ಕಾಫಿ ತೋಟಗಳಲ್ಲಿ ಬಿಡಲಾಗುತ್ತದೆ. ಮಿಲಿಬಗ್ಗ್ ಕೀಟಗಳನ್ನು ತಿನ್ನುವ ಲೆಪ್ಟೊಮ್ಯಾಸ್ಟಿಕ್ಸ್ ಡಕ್ಟಿಲೋಪಿ ಕೀಟಗಳು ಪರಾವಲಂಬಿ ಯಾದ್ದರಿಂದ ಮಿಲಿಬಗ್ಗ್ಗಳಿರುವೆಡೆ ಸುಮಾರು ೨೦೦ ರಿಂದ ೩೦೦ ಮೊಟ್ಟೆ ಇಟ್ಟು ಅಭಿವೃದ್ಧಿಪಡಿಸುವ ಮೂಲಕ ಮಿಲಿಬಗ್ಗ್ನ್ನು ತಿನ್ನುತ್ತವೆ.

ಕಾಫಿ ಗಿಡಗಳಿಗೆ ಬರುವ ರೋಗಗಳ ನಿಯಂತ್ರಣ ಕ್ರಮ, ಫಸಲು ಅಭಿವೃದ್ಧಿ, ತಳಿ ಅಭಿವೃದ್ಧಿಯ ಜೊತೆಗೆ ಮಿಲಿಬಗ್ಗ್ಗಳ ನಿಯಂತ್ರಣದ ಕ್ರಮಕ್ಕೆ ಈ ಪರತಂತ್ರ ಕೀಟಗಳ ಉಪಯುಕ್ತತೆಯ ಬಗ್ಗೆ ಬೆಳೆಗಾರರಿಗೆ ಚೆಟ್ಟಳ್ಳಿ ಕಾಫಿ ಪ್ರಾಯೋಗಿಕ ಉಪಕೇಂದ್ರÀದಲ್ಲಿ ಪ್ರಾತ್ಯಕ್ಷಿಕೆ ತರಬೇತಿ ನೀಡಲಾಗುತ್ತಿದ್ದು, ಕೀಟ ತಜ್ಞರಿಂದ ಸಂಪೂರ್ಣ ಮಾಹಿತಿ ದೊರೆಯಲಿದೆ.

ಲೆಪ್ಟೊಮ್ಯಾಸ್ಟಿಕ್ಸ್ ಡಕ್ಟಿಲೋಪಿ ಕೀಟಗಳನ್ನು ಸಾಕುತ್ತಿರುವ ಬಗ್ಗೆ ಚೆಟ್ಟಳ್ಳಿ ಕಾಫಿ ಪ್ರಾಯೋಗಿಕ ಉಪಕೇಂದ್ರದ ಉಪನಿರ್ದೇಶಕ ಡಾ. ಜಾರ್ಜ್ ಡ್ಯಾನಿಯಲ್, ಕೀಟ ತಜ್ಞರುಗಳಾದ ರಂಜಿತ್‌ಕುಮಾರ್, ಡಾ. ಮಂಜುನಾಥ್ ರೆಡ್ಡಿ ಇವರುಗಳು ಮಾಹಿತಿ ನೀಡಿದ್ದು, ಕಾಫಿ ಬೆಳೆಗಾರರಿಗೆ ಇದು ಪ್ರಯೋಜ ನಕಾರಿ ಎಂದು ಅವರುಗಳು ಅಭಿಪ್ರಾಯಿಸಿದ್ದಾರೆ.

- ಪುತ್ತರಿರ ಕರುಣ್ ಕಾಳಯ್ಯ, ಚೆಟ್ಟಳ್ಳಿ