ಕಣಿವೆ/ ಕೂಡಿಗೆ, ಸೆ. ೨೫ : ಇಲ್ಲಿಗೆ ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯಿತಿಯನ್ನು ಪಟ್ಣಣ ಪಂಚಾಯಿತಿಯಾಗಿ ಮೇಲ್ದರ್ಜೆ ಗೇರಿಸಬೇಕೆಂದು ಸರ್ಕಾರದ ಗಮನ ಸೆಳೆಯುವ ಸಂಬAಧ ಕೂಡ್ಲೂರಿನಲ್ಲಿ ಪಂಚಾಯಿತಿ ವ್ಯಾಪ್ತಿಯ ವಿವಿಧ ಪಕ್ಷಗಳ ಪ್ರಮುಖರನ್ನೊಳಗೊಂಡ ಪೂರ್ವಭಾವಿ ಸಭೆ ನಡೆಯಿತು.

ಪಟ್ಟಣ ಪಂಚಾಯಿತಿಯಾಗಿರುವ ಕುಶಾಲನಗರ ಇದೀಗ ತಾಲೂಕು ಕೇಂದ್ರವಾಗಿ ಮಾರ್ಪಟ್ಟಿರುವ ಜೊತೆಗೆ ಪುರಸಭೆಯಾಗಿ ಮೇಲ್ದರ್ಜೆಗೇರುವ ಕಾಲ ಸನ್ನಿಹಿತವಾಗಿರುವುದರಿಂದ ಕೂಡುಮಂಗಳೂರು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆ ಗೇರಿಸಿದರೆ ಈ ಭಾಗಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ. ಈಗಾಗಲೇ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗಾರಿಕ ಬಡಾವಣೆ, ಪೊಲೀಸ್ ಠಾಣೆ, ಪ್ರಮುಖ ಬ್ಯಾಂಕುಗಳು, ಸೈನಿಕ ಶಾಲೆ, ಕ್ರೀಡಾ ಶಾಲೆ, ಮೊರಾರ್ಜಿ ಶಾಲೆ, ಶಿಕ್ಷಕರ ತರಬೇತಿ ಸಂಸ್ಥೆ ಹೀಗೆ ಇನ್ನೂ ಅನೇಕ ಸವಲತ್ತುಗಳು ಇರುವುದರಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆ ಗೇರಿಸಲು ಸರ್ಕಾರಕ್ಕೆ ಆರ್ಥಿಕ ಹೊರೆ ಆಗುವುದಿಲ್ಲ ಎಂದು ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ೧೩ ಸಾವಿರ ಜನಸಂಖ್ಯೆ ಇದೆ. ಪಟ್ಟಣ ಪಂಚಾಯಿತಿಗೆ ೧೦ ಸಾವಿರ ಜನಸಂಖ್ಯೆ ಮಾನದಂಡವಾಗುತ್ತದೆ. ಆದ್ದರಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದರೆ ಸರ್ಕಾರದಿಂದ ಹೆಚ್ಚಿನ ಹಣಕಾಸಿನ ನೆರವು ದೊರೆಯಲಿದೆ. ಹಾಗಾಗಿ ಗ್ರಾಮ ವ್ಯಾಪ್ತಿಯ ರಸ್ತೆ, ಚರಂಡಿ, ಕುಡಿಯುವ ನೀರು ಹೀಗೆ ಮೂಲಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಲು ಸಮಸ್ಯೆಯಾಗುವುದಿಲ್ಲ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ಸಂಬAಧ ಪಂಚಾಯಿತಿಯ ಸರ್ವ ಸದಸ್ಯರನ್ನೊಳಗೊಂಡು ಪ್ರತ್ಯೇಕ ಗ್ರಾಮ ಸಭೆ ಹಾಗೂ ಸಾಮಾನ್ಯ ಸಭೆ ನಡೆಸಿ ಸಾಮೂಹಿಕ ನಿರ್ಣಯ ಕೈಗೊಂಡು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಕಳಿಸುವುದು. ಹಾಗೆಯೇ ಶಾಸಕ ಅಪ್ಪಚ್ಚು ರಂಜನ್ ಬಳಿ ನಿಯೋಗ ತೆರಳಿ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಶಾಸಕರ ಗಮನಕ್ಕೆ ತಂದು ಸರ್ಕಾರದ ಮೇಲೆ ಒತ್ತಡ ತರುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಪಂಚಾಯಿತಿ ಅಧ್ಯಕ್ಷೆ ಇಂದಿರಾ, ಉಪಾಧ್ಯಕ್ಷ ಭಾಸ್ಕರ ನಾಯಕ್, ವಿವಿಧ ಪಕ್ಷಗಳ ಹಾಗೂ ಸಂಘಟನೆಗಳ ಪ್ರಮುಖರಾದ ಕೆ.ಕೆ.ಮಂಜುನಾಥಕುಮಾರ್, ವಾಂಚಿರ ಮನು ನಂಜುAಡ, ಪವನ್‌ಕುಮಾರ್, ಚಂದ್ರು ಮೂಡ್ಲಿಗೌಡ, ವಕೀಲ ಭರತ್ ಮಾಚಯ್ಯ, ಫಿಲೋಮಿನಾ, ಪ್ರವೀಣ್, ಕೆ.ವರದ, ತಾ.ಪಂ. ಮಾಜಿ ಸದಸ್ಯ ಗಣೇಶ್, ಪಂಚಾಯಿತಿ ಸದಸ್ಯರಾದ ಚಂದ್ರಶೇಖರಗೌಡ, ಕುಮಾರ, ಚೈತ್ರ, ಆಶಾ, ಶಿವಮ್ಮ, ಶಶಿಕಲಾ, ಫಿಲೋಮಿನಾ, ಕೇಶವರೈ, ರಾಜನ್, ಸಾವಿತ್ರಿ ರಾಜನ್ ಮೊದಲಾದವರಿದ್ದರು.