ವೀರಾಜಪೇಟೆ, ಸೆ. ೨೫: ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಆವರಣದಲ್ಲಿ ಸುಸಜ್ಜಿತವಾದ ಸುಮಾರು ನಾಲ್ಕು ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡ ಮತ್ತು ಹೊಸದಾದ ತಂತ್ರಜ್ಞಾನ ಅಳವಡಿಸಿಕೊಂಡು ಡಿಜಿಟಲ್ ಗ್ರಂಥಾಲಯವನ್ನು ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಕೆ.ಸಿ. ಅಪ್ಪಣ್ಣ ಲೋಕಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಮಾಹಾತ್ಮ ಗಾಂಧೀಜಿ ಅವರ ಸ್ವರಾಜ್ಯದ ಪರಿಕಲ್ಪನೆಯೊಂದಿಗೆ ದೇಶವು ಅಭಿವೃದ್ಧಿಯತ್ತ ಸಾಗುತ್ತಿದೆ. ಹಳ್ಳಿಗಳಲ್ಲಿ ವಾಸ ಮಾಡುವ ಪ್ರತಿಯೊಬ್ಬರು ಸಾಕ್ಷರತೆಯೊಂದಿಗೆ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮುನ್ನಡೆಯಬೇಕು. ಸರ್ವರು ಶಿಕ್ಷಿತರಾಗುವುದರೊಂದಿಗೆ ಶಿಕ್ಷಿತ ಸಮಾಜ ನಿರ್ಮಾಣವಾಗಬೇಕು, ಡಿಜಿಟಲ್ ಗ್ರಂಥಾಲಯದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ತಾಲೂಕು ಯೋಜನಾಧಿಕಾರಿ ಚೆಲುವರಾಜು ಮಾತನಾಡಿ ಗ್ರಾಮದ ಅಭಿವೃದ್ಧಿಗಳಿಗೆ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಂಡಲ್ಲಿ ಸರ್ಕಾರದ ಎಲ್ಲಾ ಕಾರ್ಯಕ್ರಮಗಳು ಕ್ರಮಬದ್ಧವಾಗುತ್ತದೆ. ಗ್ರಾಮಾಭಿವೃದ್ಧಿಯಲ್ಲಿ ಚುನಾಯಿತ ಪ್ರತಿನಿಧಿಗಳೊಂದಿಗೆ ಗ್ರಾಮಸ್ಥರ ಸಹಕಾರ ಬಹುಮುಖ್ಯ, ಗ್ರಾಮ ಅಭಿವೃದ್ಧಿಯ ಬೇಡಿಕೆಗಳು ಹಂತ ಹಂತವಾಗಿ ಪೂರ್ಣಗೊಂಡು ಗ್ರಾಮವು ಅಭಿವೃದ್ಧಿ ಪತದತ್ತ ಸಾಗುವುದು ಶತಸಿದ್ದ ಎಂದು ಹೇಳಿದರು. ಕಾರ್ಯಕ್ರಮ ಉದ್ದೇಶಿಸಿ ಜಿಲ್ಲಾ ಮುಖ್ಯ ಗ್ರಂಥಾಲಯಧಿಕಾರಿ ಲೀಲಾವತಿ ಮತ್ತು ಕೆದಮುಳ್ಳೂರು ಗ್ರಾ.ಪಂ. ಅಧ್ಯಕ್ಷೆ ಎನ್.ಎಂ. ಶೀಲಾ ಅವರುಗಳು ಮಾತನಾಡಿದರು. ಗ್ರಾಮ ಪಂಚಾಯಿತಿ ಪಿ.ಡಿ.ಓ. ಪ್ರಮೋದ್ ಪಿ.ಕೆ. ಸ್ವಾಗತಿಸಿ, ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಎಲ್ಲಾ ವಾರ್ಡ್ಗಳ ಚುನಾಯಿತ ಸದಸ್ಯರು, ಪಂಚಾಯಿತಿ ಕಚೇರಿಯ ಸಿಬ್ಬಂದಿಗಳು ಹಾಜರಿದ್ದರು. - ಕೆ.ಕೆ.ಎಸ್.