ಕಣಿವೆ, ಸೆ. ೨೪ : ಒಂದು ಜನವಸತಿ ಪ್ರದೇಶದ ಜನರಿಗೆ ಹಸನಾದ ಬದುಕು ನಿರ್ಮಾಣ ಮಾಡಬೇಕಿದ್ದ ನೀರಾವರಿ ಯೋಜನೆ ಆ ಜನರ ಬದುಕನ್ನೇ ನಿರ್ನಾಮ ಮಾಡುತ್ತಿದೆ. ಆ ಯೋಜನೆಯ ಹೆಸರು ಚಿಕ್ಲಿಹೊಳೆ ನೀರಾವರಿ ಯೋಜನೆ. ಈ ನೀರಾವರಿ ಯೋಜನೆಯ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳ ನಿರ್ಲಕ್ಷö್ಯದಿಂದಾಗಿ ಶಾಲೆ - ಕಾಲೇಜುಗಳಿಗೆ ತೆರಳುವ ಮಕ್ಕಳು ಜೀವವನ್ನು ಪಣಕ್ಕಿಟ್ಟು ನಿತ್ಯವೂ ನರಕದಲಿ ಸಂಚಾರ ಮಾಡುತ್ತಿರುವುದು ನೋಡುಗರಿಗೆ ಮರುಕ ಉಂಟುಮಾಡುತ್ತಿದೆ.
ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬಿನಗದ್ದೆ ಹಾಗೂ ಮಳ್ಳಿಗುಡ್ಡದ ನಿವಾಸಿಗಳು ಒಂದು ರೀತಿಯಲ್ಲಿ ಸರ್ಕಾರದ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಈ ಕಬ್ಬಿನಗದ್ದೆ ಹಾಗೂ ಮಳ್ಳಿಗುಡ್ಡ ವಸತಿ ಪ್ರದೇಶದಲ್ಲಿ ೬೦ ಕ್ಕೂ ಹೆಚ್ಚು ಕುಟುಂಬಗಳಿವೆ. ಇದೇ ವಸತಿ ಪ್ರದೇಶದಲ್ಲಿ ಕಳೆದ ೨೫ ವರುಷಗಳ ಹಿಂದೆ ಚಿಕ್ಲಿಹೊಳೆ ಎಂಬ ಒಂದು ನಿರರ್ಥಕ ನೀರಾವರಿ ಯೋಜನೆಯ ಹಳೆಯ ಮತ್ತು ಹೊಸದಾದ ಎರಡು ಕಾಲುವೆಗಳು ನಿರ್ಮಾಣವಾಗಿವೆ.
ಆದರೆ ಈ ಕಾಲುವೆಗಳು ಇಲ್ಲಿನ ಮಕ್ಕಳು, ಮಹಿಳೆಯರು, ನಿವಾಸಿಗಳು ಹಾಗೂ ರೈತರಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸಿವೆ.
ಅಂದರೆ ಇಲ್ಲಿನ ಜೋಡಿ ಕಾಲುವೆಗಳ ಮೇಲೆ ಸಂಬAಧಿಸಿದ ನೀರಾವರಿ ಇಲಾಖೆ ಸಮರ್ಪಕವಾದ ಕಿರು ಸೇತುವೆಗಳನ್ನು ನಿರ್ಮಿಸದ ಕಾರಣ ಸ್ಥಳೀಯ ನಿವಾಸಿಗಳು ನಿತ್ಯದ ಸಂಚಾರಕ್ಕೆ ಅನುಕೂಲವಾಗುವಂತೆ ಮರದ ಚಿಕ್ಕದಾದ ನಾಟಾಗಳನ್ನು ಕಾಲುವೆಗೆ ಅಡ್ಡಲಾಗಿ ಹಾಕಿಕೊಂಡು ನಿತ್ಯವೂ ಇದರ ಮೇಲೆ ಕಷ್ಟಪಟ್ಟು ಸಂಚರಿಸುತ್ತಿದ್ದಾರೆ. ಈ ಜನವಸತಿ ಪ್ರದೇಶದಿಂದ ದೂರದ ರಂಗಸಮುದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂಜರಾಯಪಟ್ಟಣದ ಪ್ರೌಢಶಾಲೆ, ಕುಶಾಲನಗರದ ಕಾಲೇಜುಗಳಿಗೆ ನಿತ್ಯವೂ ೩೦ಕ್ಕಿಂತ ಹೆಚ್ಚು ಮಕ್ಕಳು ತೆರಳುತ್ತಾರೆ. ಅಷ್ಟೇ ಅಲ್ಲ ಕೂಲಿ ಕೆಲಸಗಳಿಗೆ ತೆರಳುವ ಕಾರ್ಮಿಕ ಮಹಿಳೆಯರು ಕೂಡ ಮುಖ್ಯ ರಸ್ತೆಗೆ ಹತ್ತಿರವಾಗುವ ಕಾರಣದಿಂದ ಇಲ್ಲಿನ ಕಾಲುವೆಗಳ ಮೇಲೆ ತೆರಳುವ ದುರ್ಗಮ ದಾರಿಯನ್ನು ಮಾಡಿಕೊಂಡಿದ್ದಾರೆ.
ಅಪಾಯಕಾರಿ ಏರಿ ಮೇಲೆ ಸಂಚಾರ
ಇಲ್ಲಿನ ಮಕ್ಕಳು ಹಾಗೂ ಮಹಿಳೆಯರು ಚಿಕ್ಲಿಹೊಳೆ ಎಡದಂಡೆಯ ಹಳೆಯ ಕಾಲುವೆಗೆ ಮರದ ನಾಟಾಗಳನ್ನು ಅಳವಡಿಸಿಕೊಂಡು ಒಬ್ಬರ ಕೈ ಮತ್ತೊಬ್ಬರು ಹಿಡಿವ ಮೂಲಕ ಜೀವ ಪಣಕ್ಕಿಟ್ಟು ಕಾಲುವೆ ದಾಟುವುದು ಒಂದೆಡೆಯಾದರೆ, ಹೊಸದಾದ ಕಾಂಕ್ರಿಟ್ ಕಾಲುವೆಗೆ ಏರಿ ಇಲ್ಲದ ಕಾರಣ ಕೇವಲ ಒಂದೂವರೆ ಅಡಿಯಷ್ಟು ಅಗಲದ ಕಾಲುವೆ ಏರಿ ಮೇಲೆ ಶಾಲೆಗಳಿಗೆ ತೆರಳುವ ಚಿಕ್ಕ ಮಕ್ಕಳನ್ನು ಕರೆತಂದು ಕಾಲುವೆ ದಾಟಿಸುವ ಮಹಿಳೆಯರ ಪಾಡು ಇನ್ನೂ ಹೇಳ ತೀರದು.
ಅಂದರೆ ಹಳೆಯ ಕಾಲುವೆಯ ಮೇಲ್ಭಾಗದಲ್ಲಿ ಕಾಂಕ್ರಿಟ್‌ನಿAದ ನಿರ್ಮಿಸಿದ ಹೊಸ ಕಾಲುವೆಯ ತುಂಬಾ ಒಂದೆಡೆ ಎಡಕ್ಕೆ ನೀರು ಹರಿಯುತ್ತಿದ್ದರೆ, ಮತ್ತೊಂದೆಡೆ ಸುಮಾರು ೫೦ ಅಡಿಗೂ ಹೆಚ್ಚಿನ ಪ್ರಪಾತ.
(ಮೊದಲ ಪುಟದಿಂದ) ಇದನ್ನು ನೋಡಿಕೊಂಡು ತೆರಳುವ ಸಾಹಸ ಇದೆಯಲ್ಲಾ ಅದು ನೋಡುಗರಿಗೆ ರೋಮಾಂಚನ ಮೂಡಿಸುತ್ತದೆ. ಇಲ್ಲಿಗೆ ಧಾವಿಸುವ ಹೊಸಬರು ಈ ಕಾಲುವೆ ಏರಿ ಮೇಲೆ ಹೆಜ್ಜೆ ಇಡಲು ಹೊರಟರೆ ಪ್ರಪಾತದಂತಹ ಎಡ - ಬಲ ಬದಿಗಳನ್ನು ನೋಡಿ ತಲೆ ತಿರುಗಿ ಕುಸಿಯುವುದು ಖಂಡಿತ.
ಜನಪ್ರತಿನಿಧಿಗಳ ನಿರ್ಲಕ್ಷö್ಯ
ಅಪಾಯಕಾರಿ ದಾರಿಯ ಈ ಕಾಲುವೆ ಏರಿಯ ಮೇಲೆ ಇಲ್ಲಿನ ಜನರು ನಿತ್ಯವೂ ನರಕ ಸಂಚಾರ ಮಾಡುತ್ತಿದ್ದರೂ ಕೂಡ ಸ್ಥಳೀಯ ಗ್ರಾಮಾಡಳಿತವಾಗಲೀ, ಶಾಸಕರಾಗಲೀ ಗಮನಹರಿಸುತ್ತಿಲ್ಲ. ಕೊನೇ ಪಕ್ಷ ಈ ಜನಪ್ರತಿನಿಧಿಗಳು ನೀರಾವರಿ ಇಲಾಖೆಯ ಮೇಲಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಈ ಜನರ ನಿತ್ಯದ ವ್ಯಥೆಗೆ ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳುವಲ್ಲಿ ಏಕೆ ಮುಂದಾಗುತ್ತಿಲ್ಲ ಎಂದು ಇಲ್ಲಿನ ವಾಸಿಗಳು ಪ್ರಶ್ನಿಸುತ್ತಿದ್ದಾರೆ.
ವರವಾಗದ ಕಾಲುವೆಗಳು
ಶಾಲೆಗಳಿಗೆ ತೆರಳುವ ಮಕ್ಕಳು ಹಾಗೂ ಕೂಲಿಗೆ ತೆರಳುವ ಕಾರ್ಮಿಕರಿಗೆ ಮಾತ್ರ ಈ ಕಾಲುವೆಗಳು ಶಾಪವಾಗಿಲ್ಲ. ಇಲ್ಲಿನ ತಗ್ಗು ಪ್ರದೇಶದಲ್ಲಿನ ನಿವಾಸಿಗಳಿಗೆ ಹಾಗೂ ಕೃಷಿಕರಿಗೆ ಈ ಕಾಲುವೆಗಳು ಒಳಿತಿಗಿಂತ ಕೆಡುಕೇ ಆಗಿವೆ. ಒಂದರ ಮೇಲೊಂದರAತೆ ನಿರ್ಮಾಣ ಮಾಡಿರುವ ಜೋಡಿ ಕಾಲುವೆಗಳಲ್ಲಿ ಮೋಳೆ ಬಿದ್ದು ನೀರೆಲ್ಲಾ ಪೋಲಾಗುತ್ತಿದೆ. ತಗ್ಗು ಪ್ರದೇಶಗಳ ಉದ್ದಕ್ಕೂ ವಾಸವಿರುವ ಬಹುತೇಕ ಮನೆಗಳು ಶೀತಕ್ಕೆ ತುತ್ತಾಗಿ ಗೋಡೆಗಳು ಶಿಥಿಲಾವಸ್ಥೆ ತಲುಪಿವೆ. ಇನ್ನೂ ಭತ್ತ, ಕಾಫಿ, ಬಾಳೆ, ಶುಂಠಿ ಬೆಳೆಯುತ್ತಿದ್ದ ಹೊಲ, ಗದ್ದೆಗಳಲ್ಲಿ ನೀರು ತುಂಬಿ ಕೃಷಿ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇಲ್ಲಿನ ಕೃಷಿಕರು ಸಿಲುಕಿದ್ದಾರೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಬಸವನಹಳ್ಳಿ ಲ್ಯಾಂಪ್ಸ್ ಅಧ್ಯಕ್ಷ ಆರ್.ಕೆ.ಚಂದ್ರು, ನಮ್ಮ ಬದುಕನ್ನು ಚಿಕ್ಲಿಹೊಳೆ ಯೋಜನೆ ನುಂಗಿ ನೀರು ಕುಡಿಯುತ್ತಿದೆ. ಕಳೆದ ಅನೇಕ ವರ್ಷಗಳಿಂದಲೂ ಕಾಲುವೆಗಳ ಹೂಳು ತೆಗೆದು ಕಾಡು ತೆಗೆಯಲು ಒತ್ತಾಯಿಸುತ್ತಲೇ ಇದ್ದೇವೆ. ಅಷ್ಟೇ ಅಲ್ಲ ಕಬ್ಬಿನಗದ್ದೆ, ರಸೂಲ್‌ಪುರ ಭಾಗದಲ್ಲಿ ಕಾಲುವೆಗಳು ಮೋಳೆ ಬಿದ್ದು ನೀರೆಲ್ಲಾ ರೈತರ ತೋಟ, ಗದ್ದೆಗಳ ಮೇಲೆ ಮತ್ತು ಮನೆಗಳ ಸುತ್ತಾ ಹರಿದು ಅಪಾರ ಪ್ರಮಾಣದಲ್ಲಿ ಹಾನಿ ಮಾಡುತ್ತಿರುವುದರಿಂದ ಕೂಡಲೇ ಮೋಳೆಯನ್ನು ಮುಚ್ಚಿ ನೀರು ಪೋಲಾಗದಂತೆ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳನ್ನು ಒತ್ತಾಯಿಸಿದರೂ ಕೂಡ ಯಾವುದೇ ಪ್ರಯೋಜನ ಆಗುತ್ತಿಲ್ಲ. ಇತ್ತ ನಷ್ಟವಾಗುತ್ತಿರುವ ಬೆಳೆ ಹಾಗೂ ಸೊತ್ತುಗಳ ಪರಿಹಾರವನ್ನೂ ಕೊಡುತ್ತಿಲ್ಲ ಎಂದು ದೂರಿದ್ದಾರೆ.
-ಕೆ.ಎಸ್. ಮೂರ್ತಿ