ಮಡಿಕೇರಿ, ಸೆ. ೨೪: ಕಾವೇರಿ ತುಲಾಸಂಕ್ರಮಣ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೊಡಗಿನಲ್ಲಿ ಎರಡು ತಿಂಗಳ ಕಾಲ ಪ್ರವಾಸೋದ್ಯಮವನ್ನು ಸಂಪೂರ್ಣ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಸೇವ್ ಕೊಡಗು ಫ್ರಮ್ ಟೂರಿಸಂ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ಕಾವೇರಿ ತುಲಾ ಸಂಕ್ರಮಣದ ಹಿತದೃಷ್ಟಿಯಿಂದ ಹಾಗೂ ಇಲ್ಲಿನ ಭಕ್ತರ ಆರೋಗ್ಯ ದೃಷ್ಟಿಯಿಂದ ಮತ್ತು ಇದೀಗ ತಾನೇ ಆರಂಭವಾದ ಶಾಲಾ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಕೊಡಗಿನಲ್ಲಿ ಸಂಪೂರ್ಣ ಸ್ಥಗಿತಗೊಳಿಸಬೇಕೆಂದು ಸಂಘಟನೆ ಪ್ರಮುಖರು ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ಸೇವ್ ಕೊಡಗು ಫ್ರಮ್ ಟೂರಿಸಂ ಸಂಘಟನೆ ಸಂಚಾಲಕ ಚಮ್ಮಟೀರ ಪ್ರವೀಣ್ ಉತ್ತಪ್ಪ, ನೆರೆ ರಾಜ್ಯ ಕೇರಳದಲ್ಲಿ ಕೊರೊನಾ ಸೋಂಕು ಅಧಿಕವಾಗಿದೆ. ಜೊತೆಗೆ ನಿಫಾ ವೈರಸ್ ಕೂಡ ಅಧಿಕವಾಗಿದೆ. ಕೇರಳದೊಂದಿಗೆ ಒಂದೇ ಗಡಿಯನ್ನು ಹಂಚಿಕೊAಡಿರುವ ಕೊಡಗು ಜಿಲ್ಲೆಯ ಮೇಲೆ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆ ಇದೆ. ಕೊಡಗು ಜಿಲ್ಲೆಯ ಎಲ್ಲಾ ಗಡಿಗಳಲ್ಲಿ ಕಟ್ಟುನಿಟ್ಟಿನ ಕ್ರಮದೊಂದಿಗೆ ಪ್ರವಾಸಿಗರ ಮೇಲೆ ಹದ್ದಿನ ಕಣ್ಣಿಡಬೇಕೆಂದು ಒತ್ತಾಯಿಸಿದರು.
ಸ್ಥಳೀಯ ಮೂಲ ನಿವಾಸಿಗಳ ಪ್ರಮುಖ ಹಬ್ಬಗಳಲ್ಲಿ ಒಂದಾAದ ಕಾವೇರಿ ತುಲಾ ಸಂಕ್ರಮಣದ ತೀರ್ಥೋದ್ಬವ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶದಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಕೊಡಗಿನಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಳಿತವಾಗುತ್ತಿದೆ. ಅದಲ್ಲದೆ ಕರ್ಫ್ಯೂ ತೆರವುಗೊಂಡ ನಂತರ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಕೊಡಗಿಗೆ ಆಗಮಿಸುತ್ತಿದ್ದಾರೆ. ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ಸಹಸ್ರಾರು ಸಂಖ್ಯೆಯಲ್ಲಿ ಬರುತ್ತಿರುವ ಇವರಿಂದ ಸೋಂಕು ಹರಡುವ ಭಯ ಕಾಡುತ್ತಿದೆ. ಕಾವೇರಿ ತುಲಾ ಸಂಕ್ರಮಣದಲ್ಲಿ ಸೋಂಕು ಉಲ್ಬಣಗೊಂಡು ಹಬ್ಬ ಆಚರಿಸಲು ತೊಂದರೆಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಸಂಘಟನೆ ಪ್ರಮುಖರಾದ ಚೀರಂಡ ನಂದಾ ಸುಬ್ಬಯ್ಯ, ಶ್ರೀಧರ್ ನೆಲ್ಲಿತಾಯ, ಶ್ರೀನಿವಾಸ್ ರೈ, ಉಮೇಶ್ ಕುಮಾರ್, ಅಜಿತ್ ಕೊಟ್ಟಕೇರಿಯನ, ಕಡೇಮಾಡ ವಿನೋದ್, ಅಪ್ಪಚ್ಚೀರ ಕಮಲ, ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ, ಸಣ್ಣುಂಡ ದರ್ಶನ್ ಕಾವೇರಪ್ಪ, ಪುಲಿಯಂಡ ರೋಶನ್, ಅರುಣ್ ಕೂರ್ಗ್ ಅಪಾಡಂಡ ಧನು ದೇವಯ್ಯ ಮತ್ತಿತರರು ಹಾಜರಿದ್ದರು.