ಕುಶಾಲನಗರ ಸೆ ೨೫: ಸ್ವಚ್ಛ ಭಾರತ ಅಭಿಯಾನದಲ್ಲಿ ಪೌರ ಕಾರ್ಮಿಕರ ಪಾತ್ರ ಪ್ರಮುಖವಾಗಿದೆ ಎಂದು ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್ ಹೇಳಿದರು.

ಕುಶಾಲನಗರದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲೂ ಕಾರ್ಮಿಕರು ಶ್ರಮ ಶ್ಲಾಘನೀಯ ಎಂದರು.

ಪಂಚಾಯಿತಿ ಕಾರ್ಮಿಕರ ಬಹುದಿನದ ಬೇಡಿಕೆಯಾದ ಮನೆಗಳ ನಿರ್ಮಾಣ ಮತ್ತು ಮಕ್ಕಳ ವಿದ್ಯಾಭಾಸಕ್ಕೆ ವಿಶೇಷ ಆದ್ಯತೆ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ೧೧ ಮಂದಿ ಪೌರಕಾರ್ಮಿಕರಿಗೆ ಮನೆ ಮಂಜೂರಾಗಿದ್ದು, ಹಂತ ಹಂತವಾಗಿ ಪ್ರಕ್ರಿಯೆ ನಡೆಯಲಿದೆ. ಕುಶಾಲನಗರ ಪಟ್ಟಣ ಪಂಚಾಯ್ತಿ ಮೇಲ್ದರ್ಜೆಗೆ ಏರುವುದರಿಂದ ಪೌರಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯ ದೊರೆಯಲಿದೆ ಎಂದರು. ಕಾರ್ಯಕ್ರಮದಲ್ಲಿ ದಿನಾಚರಣೆ ಅಂಗವಾಗಿ ನಡೆದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಾಲಿನಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಪೌರಕಾರ್ಮಿಕ ಮಕ್ಕಳಾದ ಮೋಹನ್ ಮತ್ತು ಅಶ್ವಿನಿ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕುಶಾಲನಗರ ಪಟ್ಟಣಪಂಚಾಯ್ತಿ ಉಪಾಧ್ಯಕ್ಷೆ ಸುರೈಯಾ ಭಾನು, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರಾದ ಪ್ರಮೋದ್‌ಮುತ್ತಪ್ಪ, ಎಂ.ವಿ ನಾರಾಯಣ, ಡಿ.ಕೆ ತಿಮ್ಮಪ್ಪ, ಪೌರ ಕಾರ್ಮಿಕ ಸಂಘದ ಅಧ್ಯಕ್ಷ ಉದಯ್, ಉಪಾಧ್ಯಕ್ಷ ಗಣೇಶ್ ಸೇರಿದಂತೆ ಜನಪ್ರತಿನಿಧಿಗಳು ಹಾಜರಿದ್ದರು.