ಕಣಿವೆ, ಸೆ. ೨೩: ಇಲ್ಲಿಗೆ ಸಮೀಪದ ಕೂಡಿಗೆಯ ಬಳಿ ಹರಿದಿರುವ ಹಾರಂಗಿ ನದಿಗೆ ನೇರವಾಗಿ ಚರಂಡಿಯ ಕಲುಷಿತವಾದ ನೀರು ಸೇರುತ್ತಿದೆ. ಅಷ್ಟೇ ಅಲ್ಲ ನದಿ ದಂಡೆಯಲ್ಲಿನ ಜನವಸತಿ ಪ್ರದೇಶಗಳಲ್ಲಿರುವ ಚರಂಡಿಗಳಲ್ಲಿ ಕಲುಷಿತ ನೀರು ತುಂಬಿ ಸೊಳ್ಳೆಗಳ ಕಾಟ ಶುರುವಾಗಿದೆ. ಇದರಿಂದಾಗಿ ಮಹಿಳೆಯರು-ಮಕ್ಕಳು ಹಾಗೂ ನಿವಾಸಿಗಳು ಡೆಂಗ್ಯೂಗೆ ಸಿಲುಕಿ ರೋಗದ ಭೀತಿಯಲ್ಲಿ ದಿನಕಳೆಯುತ್ತಿದ್ದಾರೆ.

ಆದರೂ ಕೂಡ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಚರಂಡಿಗಳನ್ನು ಸ್ವಚ್ಛಗೊಳಿಸಿ ಬ್ಲೀಚಿಂಗ್ ಪೌಡರ್ ಅಳವಡಿಸಿ ಸ್ವಚ್ಛತೆ ಕಾಪಾಡುತ್ತಿಲ್ಲ. ಹಾರಂಗಿ ನದಿಗೆ ಸೇರುತ್ತಿರುವ ಕಲುಷಿತ ನೀರಿಗೆ ಕಡಿವಾಣವನ್ನೂ ಹಾಕುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಯ್ಯಾನಿ, ಭವ್ಯ, ಗೌರಮ್ಮ ಮೊದಲಾದವರು ಕೂಡಿಗೆಯ ಮೇಲ್ಭಾಗದ ವಸತಿ ಪ್ರದೇಶದ ಕಲುಷಿತ ನೀರೆಲ್ಲಾ ನಮ್ಮ ಮನೆಗಳ ಬಳಿ ಶೇಖರಣೆಗೊಂಡು ದುರ್ನಾತ ಬೀರುತ್ತಿದ್ದು, ಕಿಟಕಿ-ಬಾಗಿಲು ತೆಗೆಯುವಂತಿಲ್ಲ. ಒಂದು ವೇಳೆ ತೆರೆದರೆ ಕೆಟ್ಟ ವಾಸನೆಯೊಂದಿಗೆ ಸೊಳ್ಳೆಗಳು ಮನೆಯೊಳಗೆ ನುಸುಳುತ್ತವೆ. ಈ ಬಗ್ಗೆ ಪಂಚಾಯಿತಿಗೆ ತೆರಳಿ ಹತ್ತಾರು ಬಾರಿ ಸಮಸ್ಯೆಗಳನ್ನು ಹೇಳಿಕೊಂಡರೂ ಕೂಡ ಏನೂ ಪ್ರಯೋಜನವಾಗಿಲ್ಲ. ವರ್ಷದಲ್ಲಿ ಒಂದೇ ಒಂದು ದಿನವೂ ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಆಗಲಿ ಫೆನಾಯಿಲ್ ಆಗಲಿ ಸಿಂಪಡಿಸಿಲ್ಲ. ದಶಕಗಳ ಹಿಂದೆ ಈ ಭಾಗದಲ್ಲಿ ನಿರ್ಮಿಸಿರುವ ರಸ್ತೆ ಹಾಗೂ ಚರಂಡಿಗಳು ಅವೈಜ್ಞಾನಿಕವಾಗಿದ್ದು, ರಸ್ತೆ ಹಾಗೂ ಚರಂಡಿ ಮೇಲೆ ಪಾರ್ಥೇನಿಯಂ ಗಿಡಗಳು ಬೆಳೆದು ಸೊಳ್ಳೆಗಳ ಆವಾಸ ತಾಣವಾಗಿವೆ ಎಂದು ಆರೋಪಿಸಿದ್ದಾರೆ.

ಜಲ ಜೀವನ್ ಯೋಜನೆಯಡಿ ಪ್ರತೀ ಮನೆಗಳ ಮುಂದೆ ಅಳವಡಿಸುತ್ತಿರುವ ಕುಡಿವ ನೀರಿನ ನಲ್ಲಿಗಳ ಸಂಪರ್ಕ ಕಾಮಗಾರಿ ಅವೈಜ್ಞಾನಿಕವಾಗಿರುವ ಬಗ್ಗೆ ನಿವಾಸಿಗಳು ದೂರಿಕೊಂಡಿದ್ದಾರೆ.