ಮಡಿಕೇರಿ, ಸೆ. ೨೩: ಸೆಪ್ಟೆಂಬರ್ ಕೊನೆಯ ವಾರದೊಳಗೆ ಪ್ರಥಮ ಹಂತದ ಲಸಿಕೆಯನ್ನು ಶೇ. ೧೦೦ ರಷ್ಟು ಪ್ರಗತಿ ಸಾಧಿಸಬೇಕಿದ್ದು, ಆ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಾಹಿತಿ ಪಡೆದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಯಾವ ವಾರ್ಡ್ಗಳಲ್ಲಿ ಲಸಿಕೆ ಪಡೆಯುವಲ್ಲಿ ಮಂದಗತಿಯಲ್ಲಿದೆ ಎಂಬ ಬಗ್ಗೆ ಮಾಹಿತಿ ಪಡೆದು ಆ ಪ್ರದೇಶಗಳಲ್ಲಿ ಶೇ. ೧೦೦ ರಷ್ಟು ಪ್ರಗತಿ ಸಾಧಿಸಬೇಕು. ಜಿಲ್ಲೆಯ ಹಾಡಿಯ ಜನರಲ್ಲಿ ಸಂಚಾರಿ ತಂಡದ ಮೂಲಕ ಅರಿವು ಮೂಡಿಸಬೇಕು. ಮನೆ ಮನೆಗೆ ತೆರಳಿ ಲಸಿಕೆ ಪಡೆಯುವಂತೆ ಮನವರಿಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

ರೆಸಾರ್ಟ್, ಹೋಂ ಸ್ಟೇಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು, ಕಾರ್ಮಿಕರು, ಲೈನ್‌ಮನೆಗಳಲ್ಲಿ ವಾಸಿಸುವ ಕಾರ್ಮಿಕರು ಹೀಗೆ ೧೮ ವರ್ಷ ಮೇಲ್ಪಟ್ಟವರೆಲ್ಲರೂ ಕೋವಿಡ್ ಲಸಿಕೆ ಪಡೆಯಲು ಮನವರಿಕೆ ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್. ವೆಂಕಟೇಶ್ ಅವರು ತಾ. ೨೫ ರೊಳಗೆ ಲಸಿಕೆ ಪಡೆಯುವವರ ಶೇ. ೧೦೦ ರಷ್ಟು ಪ್ರಗತಿ ಸಾಧಿಸಲಾಗುವುದು. ಆ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಲಸಿಕಾ ಅಧಿಕಾರಿ ಡಾ. ಗೋಪಿನಾಥ್, ಜಿಲ್ಲೆಯ ಕೆಲವು ಕಡೆಗಳಲ್ಲಿ ಹಾಗೂ ಹಾಡಿಗಳಲ್ಲಿ ಲಸಿಕೆ ಪಡೆಯಲು ಹಿಂದೆ ಉಳಿದಿವೆ. ಅಂತಹ ಕಡೆಗಳಲ್ಲಿ ವಿವಿಧ ಇಲಾಖೆಗಳ ಸಹಕಾರ ಪಡೆದು ೧೮ ವರ್ಷ ಮೇಲ್ಪಟ್ಟವರು ಕೋವಿಡ್ ನಿರೋಧಕ ಲಸಿಕೆ ಪಡೆಯಲು ಮನವರಿಕೆ ಮಾಡಲಾಗುತ್ತಿದೆ ಎಂದರು.

‘ಜಿಲ್ಲೆಯಲ್ಲಿ ೧೮ ವರ್ಷ ಮೇಲ್ಪಟ್ಟವರು ಸುಮಾರು ೪,೦೨,೫೬೦ ಮಂದಿ ಇದ್ದು, ಇವರಲ್ಲಿ ೩,೬೪,೦೯೫ ಮಂದಿ ಪ್ರಥಮ ಹಂತದ ಲಸಿಕೆ ಪಡೆದು, ಶೇ. ೯೦.೪೪ ರಷ್ಟು ಪ್ರಗತಿ ಸಾಧಿಸಲಾಗಿದೆ. ಹಾಗೆಯೇ ೧,೫೭,೪೧೨ ಮಂದಿ ಪ್ರಥಮ ಮತ್ತು ದ್ವಿತೀಯ ಹಂತದ ಲಸಿಕೆಯನ್ನು ಪಡೆದು ಶೇ. ೩೯.೧ ರಷ್ಟು ಸಾಧನೆ ಮಾಡಲಾಗಿದೆ ಎಂದು ಡಾ. ಗೋಪಿನಾಥ್ ಮಾಹಿತಿ ನೀಡಿದರು.’

ಈ ಬಗ್ಗೆ ಪೌರಾಯುಕ್ತ ರಾಮದಾಸ್ ಅವರು ಸ್ಥಳೀಯ ನಗರಸಭಾ ಸದಸ್ಯರೊಂದಿಗೆ ಚರ್ಚಿಸ ಲಾಗಿದ್ದು, ೧೮ ವರ್ಷ ಮೇಲ್ಪಟ್ಟ ವರೆಲ್ಲರೂ ಲಸಿಕೆ ಪಡೆಯು ವಂತಾಗಲು ಶ್ರಮಿಸಲಾಗುವುದು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಮಹೇಶ್, ತಾಲೂಕು ವೈದ್ಯಾಧಿಕಾರಿ ಗಳಾದ ಡಾ. ಯತಿರಾಜು, ಡಾ. ಶ್ರೀನಿವಾಸ್, ಡಾ. ಮಂಜುನಾಥ್ ಅವರು ಕೋವಿಡ್ ಲಸಿಕೆ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.