ಮಡಿಕೇರಿ, ಸೆ. ೨೩: ತುರ್ತು ಸ್ಪಂದನ ಸಹಾಯ ವ್ಯವಸ್ಥೆಯನ್ನು ಶಿಕ್ಷಕರ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಿ, ಮನೆ ಮನೆಗೆ ಪರಿಚಯಿಸುವ “೧೧೨ ಅಭಿಯಾನ"ವನ್ನು ವಾಟ್ಸಪ್ ಮೂಲಕ ಪ್ರಾರಂಭಿಸಿ, ಶಿಕ್ಷಕರ ಸಂಘಟನೆಯ ಮುಖ್ಯಸ್ಥರನ್ನು ಒಟ್ಟು ಗೂಡಿಸಿ, ಅವರಲ್ಲಿ ಮಾಹಿತಿ ಹಂಚಿ ಕೊಂಡು ಅದನ್ನು ತಮ್ಮ ತಮ್ಮ ಅಧೀನದ ಮುಖ್ಯೋಪಾಧ್ಯಾಯರ ಮೂಲಕ ಪ್ರತಿ ಶಾಲೆಯ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಪ್ರಾರಂಭಿಸಲಾಗಿದೆ.

ಕಾರ್ಯಕ್ರಮಕ್ಕೆ ಪ್ರತಿಕ್ರಿಯೆ ದೊರೆತಿದ್ದು, ಕಾರ್ಯಕ್ರಮದ ಮೊದಲ ಭಾಗವಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರ ನಿರ್ದೇಶನದಂತೆ ಪೊಲೀಸ್ ನಿರೀಕ್ಷಕ ಕೆ.ಆರ್. ಕರುಣಾ ಸಾಗರ್ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪ ನಿರೀಕ್ಷಕ ಕೆ.ಎಸ್. ಹರಿಶ್ಚಂದ್ರ ಮತ್ತು ಕೆ.ಎಸ್. ಧನಂಜಯ ಅವರು ನಗರದ ಪದವಿಪೂರ್ವ ಕಾಲೇಜಿನಲ್ಲಿ “೧೧೨ ಅಭಿಯಾನ"ದ ಬಗ್ಗೆ ಮಾಹಿತಿ ನೀಡಿದರು.