ಮಡಿಕೇರಿ, ಸೆ. ೨೩: ಜಗತ್ತಿನಾದ್ಯಂತ ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ ಎಂದು ರೋಟರಿ ರಾಜ್ಯಪಾಲ ರವೀಂದ್ರ ಭಟ್ ಹೇಳಿದರು.

ಮಡಿಕೇರಿ ಮಿಸ್ಟಿಹಿಲ್ಸ್ ವತಿಯಿಂದ ಕಡಗದಾಳು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಸಭಾಂಗಣ ದಲ್ಲಿ ವಿದ್ಯಾ ಸೇತು ಮಾರ್ಗದರ್ಶಿ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರವೀಂದ್ರ ಭಟ್, ೧೯೮೫ರಲ್ಲಿ ಮೊದಲ ಬಾರಿಗೆ ರೋಟರಿ ಸಂಸ್ಥೆ ಪೋಲಿಯೋ ನಿರ್ಮೂಲನೆಗಾಗಿ ವಿವಿಧ ಯೋಜನೆಗಳೊಂದಿಗೆ ಮುಂದಾಯಿತು. ಜಗತ್ತಿನಾದ್ಯಂತ ರೋಟರಿ ಸಂಸ್ಥೆಗಳು ಪೋಲಿಯೋ ವಿರುದ್ಧದ ಜಾಗತಿಕ ಹೋರಾಟಕ್ಕೆ ಟೊಂಕ ಕಟ್ಟಿ ನಿಂತವು. ಇದರ ಫಲವಾಗಿಯೇ ೩೬ ವರ್ಷಗಳ ಬಳಿಕ ಇದೀಗ ಪಾಕಿಸ್ತಾನ, ಅಫ್ಗಾನಿಸ್ತಾನ ಹೊರತಾಗಿ ವಿಶ್ವವ್ಯಾಪಿ ಪೋಲಿಯೋ ನಿರ್ಮೂಲನೆಯಾಗಿದ್ದು, ಸದ್ಯದಲ್ಲಿಯೇ ಪೋಲಿಯೋ ಮುಕ್ತ ಜಗತ್ತು ಘೋಷಣೆಯಾಗಲಿದೆ ಎಂದು ರವೀಂದ್ರ ಭಟ್ ಹೇಳಿದರು.

ಭಾರತದಲ್ಲಿ ಪ್ರಸ್ತುತ ೧.೫೬ ಲಕ್ಷ ಸದಸ್ಯರು ರೋಟರಿ ಸಂಸ್ಥೆಯಲ್ಲಿದ್ದು, ಕಳೆದ ವರ್ಷ ಕೋವಿಡ್ ನಿರ್ಮೂಲನೆಗಾಗಿ ಕೇಂದ್ರ ಸರ್ಕಾರಕ್ಕೆ ಭಾರತೀಯ ರೋಟರಿ ಸಂಸ್ಥೆಗಳು ೩೬೦ ಕೋಟಿ ರೂ. ಆರ್ಥಿಕ ನೆರವು ನೀಡಿವೆ. ಈ ವರ್ಷ ಕರ್ನಾಟಕದ ಸರ್ಕಾರಿ ಶಾಲೆಗಳ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ೫.೬೦ ಲಕ್ಷ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ ಗಳಿಗಾಗಿ ವಿದ್ಯಾಸೇತು ಎಂಬ ಮಾರ್ಗದರ್ಶಿ ಪುಸ್ತಕಗಳನ್ನು ನೀಡಲಾಗುತ್ತಿದ್ದು, ಈಗಾಗಲೇ ೧.೫೦ ಕೋಟಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಗಿದೆ ಎಂದರು.

ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಮಿಸ್ಟಿಹಿಲ್ಸ್ ವತಿಯಿಂದ ಮಡಿಕೇರಿ ವ್ಯಾಪ್ತಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಪಯುಕ್ತ ವಾಗಬಲ್ಲ ವಿದ್ಯಾಸೇತು ಮಾರ್ಗ ದರ್ಶಿ ಕೈಪಿಡಿ ವಿತರಣೆಯ ಯೋಜನೆ ಇದೆ ಎಂದರು. ವಿದ್ಯಾಸೇತು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಗಳಿಸಲು ಬಹಳ ಉಪಯುಕ್ತ ವಾಗಬಲ್ಲ ಮಾಗದರ್ಶಿಯಾಗಿದೆ ಎಂದು ಹೇಳಿದರು.

ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ. ಮಾತನಾಡಿ, ಕಡಗದಾಳು ಸರ್ಕಾರಿ ಪ್ರೌಢಶಾಲೆಯನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯಂತ ಉತ್ತಮವಾಗಿ ಶಿಕ್ಷಕ ವರ್ಗ ರೂಪುಗೊಳಿಸಿದೆ. ಇದು ಸರ್ಕಾರಿ ಶಾಲೆಗಳಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಸ್ಮಿತಾ ರವೀಂದ್ರಭಟ್, ಮಿಸ್ಟಿಹಿಲ್ಸ್ ಶಿಕ್ಷಣ ಯೋಜನಾ ನಿರ್ದೇಶಕಿ ಸವಿತಾ ಅರುಣ್, ರೋಟರಿ ಜಿಲ್ಲಾ ಯೋಜನಾ ನಿರ್ದೇಶಕ ದೇವಣಿರ ತಿಲಕ್, ಸಾಮಾಜಿಕ ಜಾಲತಾಣಗಳ ನಿರ್ದೇಶಕ ಮೋಹನ್ ಪ್ರಭು, ಮುಂದಿನ ವರ್ಷದ ಅಧ್ಯಕ್ಷ ಪ್ರಸಾದ್ ಗೌಡ, ಶಾಲಾ ಮುಖ್ಯ ಶಿಕ್ಷಕಿ ಗಂಗಮ್ಮ, ಶಿಕ್ಷಕ ವರ್ಗ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ರೋಟರಿ ಮಿಸ್ಟಿಹಿಲ್ಸ್ ಕಾರ್ಯದರ್ಶಿ ಪಿ.ಆರ್. ರಾಜೇಶ್ ವಂದಿಸಿದರು.