ಕೂಡಿಗೆ, ಸೆ. ೨೩: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಾವೇರಿ ನದಿಗೆ ಸೇತುವೆ ನಿರ್ಮಾಣ ಮಾಡುವಂತೆ ಈ ವ್ಯಾಪ್ತಿಯ ಆರು ಗ್ರಾಮಗಳ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೊಡಗು - ಮೈಸೂರು ಜಿಲ್ಲೆಯ ಸಂಪರ್ಕಕ್ಕೆ ಅನುಕೂಲ, ಅಲ್ಲದೆ ಸಮೀಪದ ಗ್ರಾಮಗಳ ಮೂಲಕ ಬೆಟ್ಟದಪುರವನ್ನು ತಲುಪಿ ಮೈಸೂರು ಕಡೆಗೆ ಹೋಗಲು ಅನುಕೂಲ ವಾಗುವಂತೆ ಮತ್ತು ಆ ವ್ಯಾಪ್ತಿಯ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಕೊಡಗು ಜಿಲ್ಲೆಗೆ ಬರಲು ಹತ್ತಿರದ ಮಾರ್ಗವಾಗಿರುತ್ತದೆ; ಪ್ರಮುಖವಾಗಿ ಚಿಕ್ಕಅಳುವಾರ ಗ್ರಾಮದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಿಗೆ ಮತ್ತು ಅಧಿಕಾರಿ ವರ್ಗದವರಿಗೆ ಮತ್ತು ರಾಜ್ಯದ ಪ್ರಥಮ ಪಶುಪಾಲನಾ ಇಲಾಖೆಯ ಡಾಕ್ಟರ್‌ಗಳಿಗೆ ಹೆಚ್ಚಿನ ತರಬೇತಿ ನೀಡುವ ಕೇಂದ್ರವು ಈ ಸ್ಧಳದಲ್ಲಿದೆ, ತೊರೆನೂರು ಸೋಮವಾರಪೇಟೆ, ಬಾಣವಾರ ರಸ್ತೆಯ ಸಂಪರ್ಕ ರಸ್ತೆಯು ಈಗಾಗಲೇ ಅಗಲೀಕರಣಗೊಂಡು ಬಸ್‌ಗಳ ಓಡಾಟ ಆರಂಭವಾಗಲಿದೆ ಇದರಿಂದಾಗಿ ಇಲ್ಲಿ ಸೇತುವೆ ನಿರ್ಮಿಸಿದಲ್ಲಿ ಬಹಳಷ್ಟು ಅನುಕೂಲವಾಗಲಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.

ಸರಕಾರವು ನೀರಾವರಿ ಇಲಾಖೆಯ ವಿವಿಧ ಯೋಜನೆ ಗಳನ್ನು ಕೈಗೊಳ್ಳಲು ಸಿದ್ದವಾಗಿದೆ ತೊರೆನೂರು ಗ್ರಾಮ ಸಮೀಪದ ಕಾವೇರಿ ನದಿಗೆ ಶಾಶ್ವತವಾದ ಸೇತುವೆಯನ್ನು ನಿರ್ಮಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದವರು ಮುಂದಾಗಬೇಕೆAದು ಈ ವ್ಯಾಪ್ತಿಯ ಅಳುವಾರ, ತೊರೆನೂರು, ಸಿದ್ದಲಿಂಗಪುರ ಉಪಗ್ರಾಮಗಳ ಪ್ರಮುಖರಾದ ಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಚಂದ್ರಪ್ಪ, ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ ಎಸ್. ಕೃಷ್ಣೇಗೌಡ ಸಹಕಾರ ಸಂಘದ ನಿರ್ದೇಶಕ ರಾದ ಟಿ.ಕೆ. ಪಾಂಡುರAಗ , ಅಳುವಾರದ ಪ್ರೇಮಕುಮಾರ, ಶಿವಕುಮಾರ ಗ್ರಾಮದ ಪ್ರಮುಖರಾದ ಸೋಮಚಾರಿ, ಸಣ್ಣಸ್ವಾಮಿ, ತಂಗುರಾಜ್, ರಾಜಪ್ಪ, ಕಿರಣ್ ಕುಮಾರ್ ಗಣೇಶ, ರಾಜು ಸೇರಿದಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ನೀರಾವರಿ ಇಲಾಖೆಯ ಅಭಿಯಂತರರಿಗೆ ಮನವಿ ಮಾಡಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ