ಸೋಮವಾರಪೇಟೆ, ಸೆ. ೨೩: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶದಲ್ಲಿ ಜಾನುವಾರುಗಳ ಕಳ್ಳತನ ನಿರಂತರವಾಗಿದ್ದು, ಇಂತಹ ಕುಕೃತ್ಯಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ, ರೈತ ಮೋರ್ಚಾ ಪ್ರಮುಖರು ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ಮುತ್ತಣ್ಣ, ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅವ್ಯಾಹತವಾಗಿ ಜಾನುವಾರುಗಳ ಕಳ್ಳತನವಾಗುತ್ತಿದೆ ಎಂದು ಆರೋಪಿಸಿದರು.

ಮನೆಯ ಸುತ್ತಮುತ್ತ ಮೇಯಲು ಬಿಡುವ ಜಾನುವಾರುಗಳನ್ನು ಕಳ್ಳರು ಕದ್ದೊಯ್ಯುತ್ತಿದ್ದಾರೆ. ರಾತ್ರಿ ಹಾಗೂ ನಸುಕಿನ ವೇಳೆಯಲ್ಲೇ ಹೆಚ್ಚು ಕಳ್ಳತನಗಳು ನಡೆಯುತ್ತಿವೆ. ರೈತರ ಜೀವನಾಡಿಯಾಗಿರುವ ಜಾನುವಾರುಗಳನ್ನು ಮಾಂಸಕ್ಕಾಗಿ ಕಳವು ಮಾಡುವ ವ್ಯವಸ್ಥಿತ ಜಾಲ ಬೇರುಬಿಟ್ಟಿದ್ದು, ಇದನ್ನು ಮಟ್ಟಹಾಕಬೇಕೆಂದು ಆಗ್ರಹಿಸಿದರು.

ಈಗಾಗಲೇ ಪಟ್ಟಣದ ಬಸವೇಶ್ವರ ರಸ್ತೆ, ರೇಂಜರ್ ಬ್ಲಾಕ್, ಚೌಡ್ಲು, ಆಲೇಕಟ್ಟೆ, ಗಾಂಧಿನಗರ ವ್ಯಾಪ್ತಿಯಲ್ಲಿ ೨೫ಕ್ಕೂ ಅಧಿಕ ಜಾನುವಾರುಗಳ ಕಳ್ಳತನವಾಗಿದೆ. ಕರು ಹಾಕಿದ ಹಸುಗಳೊಂದಿಗೆ, ಗಬ್ಬದ ಹಸುಗಳನ್ನೂ ಸಹ ಕಳವು ಮಾಡಲಾಗುತ್ತಿದೆ. ರಾತ್ರಿ ವೇಳೆ ಪೊಲೀಸ್ ಬೀಟ್ ಹೆಚ್ಚಿಸಬೇಕು. ಅನುಮಾನಾಸ್ಪದ ವಾಹನಗಳನ್ನು ತಪಾಸಣೆ ನಡೆಸಬೇಕೆಂದು ರೈತ ಮೋರ್ಚಾದ ಪದಾಧಿಕಾರಿಗಳು ಒತ್ತಾಯಿಸಿದರು.

ಈ ಸಂದರ್ಭ ರೈತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಂದಳ್ಳಿ ದಿನೇಶ್, ಉಪಾಧ್ಯಕ್ಷ ಮಚ್ಚಂಡ ಪ್ರಕಾಶ್, ಮಂಡಲ ಅಧ್ಯಕ್ಷ ಜಗದೀಶ್ ತೊರೆನೂರು, ಪ್ರಧಾನ ಕಾರ್ಯದರ್ಶಿ ಪ್ರಜಾ ಪೂಣಚ್ಚ ಸೇರಿದಂತೆ ಇತರರು ಉಪಸ್ಥಿತರಿದ್ದರು.