ಪೊನ್ನಂಪೇಟೆ, ಸೆ. ೨೩: ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಕ್ಲಸ್ಟರ್ ನಲ್ಲಿ ಕಳೆದ ೪ ವರ್ಷಗಳಿಂದ ನಿಯೋಜಿತ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದ ತಿರುನೆಲ್ಲಿಮಾಡ ಜೀವನ್ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಿಕ್ಷಕರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭ ಕ್ಷೇತ್ರ ಸಮನ್ವಯಾಧಿಕಾರಿ ವನಜಾಕ್ಷಿ ಮಾತನಾಡಿ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಿಕ್ಷಕರನ್ನು ಒಗ್ಗೂಡಿಸುವ ಕಾರ್ಯವನ್ನು ಜೀವನ್ ಮಾಡಿದ್ದಾರೆ. ಟಿ. ಶೆಟ್ಟಿಗೇರಿ ಕ್ಲಸ್ಟರ್ ವ್ಯಾಪ್ತಿಯ ೧೬ ಸರ್ಕಾರಿ ಪ್ರಾಥಮಿಕ ಶಾಲೆ, ಒಂದು ಸರಕಾರಿ ಪ್ರೌಢಶಾಲೆ, ೨ ಅನುದಾನಿತ ಮತ್ತು ೪ ಅನುದಾನರಹಿತ ಶಾಲೆಗಳಿದ್ದು, ಗಡಿಭಾಗದಲ್ಲಿರುವ ಶಾಲೆಗಳಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು.
ಈ ಸಂದರ್ಭ ಕ್ಲಸ್ಟರ್ ವ್ಯಾಪ್ತಿಯ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಜರಿದ್ದರು. ಸಮೂಹ ಸಂಪನ್ಮೂಲ ವ್ಯಕ್ತಿ ರಾಜೇಶ್ವರಿ ಸ್ವಾಗತಿಸಿದರು. ಅನಿತಾ ಕುಮಾರಿ ನಿರೂಪಿಸಿ, ಗಂಗಮ್ಮ ವಂದಿಸಿದರು.