ಶನಿವಾರಸಂತೆ, ಸೆ. ೨೩: ಶನಿವಾರಸಂತೆ ಪಟ್ಟಣ ವ್ಯಾಪ್ತಿ ಹಾಗೂ ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಕಾಫಿ ತೋಟಗಳಲ್ಲಿ, ಹಿಂದೂ ರುದ್ರಭೂಮಿ ದ್ವಾರದ ಬಳಿ ಹಾಗೂ ಗಡಿಭಾಗ ಚಂಗಡಹಳ್ಳಿಯಲ್ಲಿ ಕಾಡಾನೆಯೊಂದು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಮಂಗಳವಾರ ಸಂಜೆ ಗಡಿಭಾಗ ಚಂಗಡಹಳ್ಳಿಯಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ಬುಧವಾರ ಹಗಲಿನಲ್ಲಿ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೆಲ ಕಾಫಿ ತೋಟಗಳಿಗೆ ನುಗ್ಗಿ ಬೆಳೆ ಹಾನಿಪಡಿಸಿದೆ. ಹಿಂದೂ ರುದ್ರಭೂಮಿ ದ್ವಾರದ ಬಳಿಯೂ ಸಂಚರಿಸಿದ್ದು ಹೆಜ್ಜೆ ಗುರುತು ಗಮನಿಸಿದ ರುದ್ರಭೂಮಿ ಬಳಿ ಬಂದಿದ್ದ ಜನ ಗಾಬರಿಯಾಗಿದ್ದಾರೆ.

ಈ ವಿಚಾರವಾಗಿ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ ಪ್ರತಿಕ್ರಿಯಿಸಿ ಗುಂಪಿನಿAದ ಬೇರ್ಪಟ್ಟ ಕಾಡಾನೆಯೊಂದು ಈ ವಿಭಾಗದಲ್ಲಿ ಸಂಚರಿಸಿದ್ದು, ಅದನ್ನು ಬುಧವಾರ ರಾತ್ರಿಯೇ ಯಸಳೂರು ಅರಣ್ಯದತ್ತ ಓಡಿಸಲಾಗಿದೆ. ಬೆಳೆ ಹಾನಿಯಾಗಿರುವ ತೋಟ ಮಾಲೀಕರು ಅರ್ಜಿ ಸಲ್ಲಿಸಿದ ನಂತರ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.