ಸೋಮವಾರಪೇಟೆ, ಸೆ. ೨೧: ದೇಶಕ್ಕೆ ಅನ್ನ ನೀಡುತ್ತಿರುವ ರೈತ ವರ್ಗ ಸಂಕಷ್ಟದಲ್ಲಿದ್ದು, ಸಂಘಟಿತ ಹೋರಾಟದ ಮೂಲಕ ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಪಡವಲಪುರ ನಾಗೇಂದ್ರ ಹೇಳಿದರು.
ತಾಲೂಕು ರೈತ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸಂಘಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತ ಹೋರಾಟಗಳು ಬಲಿಷ್ಠವಾದಾಗ ಮಾತ್ರ ಸರ್ಕಾರದಿಂದ ಸೌಲಭ್ಯಗಳು ದೊರೆಯುತ್ತವೆ. ಹೋರಾಟದ ಕೊರತೆಯಿಂದ ಈಗಾಗಲೇ ಎಲ್ಲಾ ಸೌಲಭ್ಯಗಳನ್ನು ಕಳೆದುಕೊಂಡಿದ್ದೇವೆ ಎಂದರು. ರೈತರ ಮಕ್ಕಳು ವಿಧಾನ ಸಭೆಯಲ್ಲಿ ಇದ್ದಾರೆ. ಆದರೆ ರೈತರ ಪರ ಕೆಲಸ ಮಾಡುತ್ತಿಲ್ಲ. ಅಧಿಕಾರಕ್ಕಾಗಿ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು, ರೈತರಿಗೆ ಮೋಸ ಬಗೆಯುತ್ತಿದ್ದಾರೆ ಎಂದು ದೂರಿದ ಅವರು, ೨೦೨೧-೨೧ರ ಬಜೆಟ್ ಮಂಡನೆಯ ಸಂದರ್ಭ ಮಲೆನಾಡಿನ ಕಾಫಿ ಬೆಳೆಗಾರರ ೧೦ ಹೆಚ್.ಪಿ. ಸಾಮರ್ಥ್ಯದ ಪಂಪ್ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ ಇದುವರೆಗೆ ಭರವಸೆ ಈಡೇರಿಲ್ಲ. ಇನ್ನು ಹೋರಾಟದ ಮೂಲಕ ಉಚಿತ ವಿದ್ಯುತ್ ಪಡೆದುಕೊಳ್ಳಬೇಕು ಎಂದು ಹೇಳಿದರು.
ದೇಶದ ೫೦೦ಕ್ಕಿಂತ ಹೆಚ್ಚು ರೈತ ಸಂಘಟನೆಗಳ ರಾಷ್ಟಿçÃಯ ಕಿಸಾನ್ ಮೋರ್ಚಾ ಕರೆ ನೀಡಿರುವ ಸೆ.೨೭ರ ಭಾರತ್ ಬಂದ್ಗೆ ಕೊಡಗು ಜಿಲ್ಲೆಯಿಂದಲೂ ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ಸಭೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಸೋಮಯ್ಯ, ರೈತ ಮುಖಂಡರಾದ ಜೈಶಂಕರ್, ಕಾರ್ಯಪ್ಪ, ಚಂಗಪ್ಪ, ಲಕ್ಷö್ಮಣ, ಸುಬ್ಬಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.