ರಂಜನ್ ಪ್ರಶ್ನೆಗೆ ಸಚಿವ ನಾಗರಾಜ್ ಉತ್ತರ
ಮಡಿಕೇರಿ, ಸೆ. ೨೧: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಯನ್ನು ಪುರಸಭೆಯಾನ್ನಾಗಿಸಲು ಕೊಡಗು ಜಿಲ್ಲಾಧಿಕಾರಿ ಪೌರಾಡಳಿತ ನಿರ್ದೇಶನಾಲಯಕ್ಕೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಸೂಕ್ತ ಶಿಫಾರಸಿನೊಂದಿಗೆ ಪೌರಾಡಳಿತ ನಿರ್ದೇಶಕರು ಸರಕಾರಕ್ಕೆ ಸಲ್ಲಿಸಿದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕಾ ಸಚಿವ ಎಂ.ಟಿ.ಬಿ ನಾಗರಾಜ್ ಹೇಳಿದ್ದಾರೆ.
ಸೋಮವಾರಪೇಟೆ, ಕುಶಾಲನಗರ, ವೀರಾಜಪೇಟೆ ಪಟ್ಟಣ ಪಂಚಾಯಿತಿಗಳನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸರಕಾರ ಕೈಗೊಂಡಿರುವ ಕ್ರಮಗಳ ಕುರಿತು ಶಾಸಕ ಅಪ್ಪಚ್ಚು ರಂಜನ್ ಸದನದಲ್ಲಿ ಸರಕಾರವನ್ನು ಪ್ರಶ್ನಿಸಿದ್ದರು.
ಸೋಮವಾರಪೇಟೆ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಕೊಡಗು ಜಿಲ್ಲಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಸಮರ್ಪಕ ದಾಖಲೆ ಇಲ್ಲದ ಕಾರಣ ಎಲ್ಲಾ ದಾಖಲಾತಿಗಳನ್ನು ಒದಗಿಸುವಂತೆ ೨೦೨೧ರ ಮಾರ್ಚ್ ೨೪ರಂದು ಕೊಡಗು ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ಸಚಿವರು ಉತ್ತರಿಸಿದರು.