ವೀರಾಜಪೇಟೆ, ಸೆ. ೨೧: ಗಾಂಜಾ ಗಿಡಗಳನ್ನು ಬೆಳೆಸಿದ್ದ ಪಶ್ಚಿಮ ಬಂಗಾಳ ಮೂಲದ ಇಬ್ಬರು ಕಾರ್ಮಿಕರುಗಳನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರುಗಳಾದ ಮೊಹಮ್ಮದ್ ಅಬ್ದುಲ್ ರಖೀಬ್ (೨೮) ಮತ್ತು ಸಲೀಂ ಶೇಖ್ (೩೩) ಗಾಂಜಾ ಗಿಡ ಬೆಳೆಸಿ ಬಂಧಿತರಾದ ಆರೋಪಿಗಳು.
ಪಶ್ಚಿಮ ಬಂಗಾಳದಿAದ ಕೆಲಸ ಅರಸಿ ಬಂದ ಕಾರ್ಮಿಕರು ನಗರದ ಸಿಲ್ವ ನಗರದಲ್ಲಿ ಮನೆ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡು ಅಲ್ಲೇ ವಾಸಿಸುತ್ತಿದ್ದರು. ಕಾರ್ಮಿಕರು ಗಾಂಜಾ ವ್ಯಸನಿಗಳಾಗಿದ್ದು, ಯಾರಿಗೂ ತಿಳಿಯದ ರೀತಿಯಲ್ಲಿ ನಿವೇಶನ ಬಳಿ ಗಾಂಜಾ ಬೀಜಗಳನ್ನು ಬಿತ್ತಿದ್ದಾರೆ. ನಂತರದಲ್ಲಿ ಗಾಂಜಾ ಗಿಡ ಬೆಳೆದು ಎಂಟು ಅಡಿ ಎತ್ತರಕ್ಕೆ ಬೆಳೆದಿದೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಗರ ಪೊಲೀಸ್ ಸಿಬ್ಬಂದಿಗಳು ನಗರದ ಸ್ವಿಲ್ವ ನಗರದ ನಿರ್ಮಾಣ ಹಂತದ ಮನೆಯ ಮೇಲೆ ದಾಳಿ ನಡೆಸಿದ್ದಾರೆ.
ದಾಳಿ ವೇಳೆಯಲ್ಲಿ ಸುಮಾರು ೧ ಕೆ.ಜಿ. ೮೦೦ ಗ್ರಾಂ ತೂಕದ ಹಸಿ ಗಾಂಜ ಗಿಡ ರೂ. ೨೫,೦೦೦ ಮೌಲ್ಯದಾಗಿದೆ ಎಂದು ಅಂದಾಜಿಸಲಾಗಿದೆ. ಆರೋಪಿತರ ಮೇಲೆ ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ. ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ, ವೀರಾಜಪೇಟೆ ಉಪವಿಭಾಗ ಡಿವೈಎಸ್ಪಿ ಅವರ ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೃತ್ತ ನೀರಿಕ್ಷಕ ಬಿ.ಎಸ್. ಶ್ರೀಧರ್, ವೀರಾಜಪೇಟೆ ನಗರ ಠಾಣೆಯ ಅಪರಾಧ ವಿಭಾಗದ ಪಿ.ಎಸ್.ಐ. ಹೆಚ್.ಎಸ್. ಬೋಜಪ್ಪ, ನಗರ ಪಿ.ಎಸ್.ಐ. ಜಗದೀಶ್ ಧೂಳ್ ಶೆಟ್ಟಿ, ಸಿಬ್ಬಂದಿಗಳಾದ ಖಾದರ್, ಮಧುಕುಮಾರ್, ಪಿ.ಎಂ. ಮುನೀರ್, ರಜನ್ ಕುಮಾರ್, ಮಹಿಳಾ ಸಿಬ್ಬಂದಿ ಗೀತಾ ಮತ್ತು ಆನಂದ್ ಡೊಳ್ಳಿ ಭಾಗವಹಿಸಿದ್ದರು.
-ಕಿಶೋರ್ ಕುಮಾರ್ ಶೆಟ್ಟಿ