ಮಡಿಕೇರಿ, ಸೆ. ೨೧: ವಾಸ್ತವವಾಗಿ ಈ ಯುವಕ ಬಿಳಿ ಸೇರಿದಂತೆ ರಂಗುರAಗಿನ ಪಾರಿವಾಳಗಳನ್ನು ದೂರದ ಕೇರಳದಿಂದ ತಂದಿದ್ದು ಮಾರಾಟ ಮಾಡಲೆಂದು. ಆದರೆ ಪಕ್ಷಿ, ಬೆಕ್ಕು ಮತ್ತಿತರ ಸಾಕು ಪ್ರಾಣಿಗಳ ಮೇಲೆ ಅಪಾರವಾದ ವಾತ್ಸಲ್ಯ ಹೊಂದಿರುವ ಇವರಿಗೆ ಪಾರಿವಾಳಗಳನ್ನು ಬಿಕರಿ ಮಾಡಲು ಮನಸ್ಸು ಬಂದಿರಲಿಲ್ಲ. ಹೀಗಾಗಿ ಮನೆಯ ಟೆರೇಸ್ ನಲ್ಲಿ ಅಂದವಾದ ಗೂಡು ನಿರ್ಮಿಸಿ ಲಾಲಿಸುತ್ತಿದ್ದ. ಆದರೆ ಯಾರೋ ಧುರುಳರು ಈತನ ಮುದ್ದಿನ ಪಾರಿವಾಳಗಳನ್ನು ರಾತೋರಾತ್ರಿ ಕದ್ದೊಯ್ದಿದ್ದಾರೆ. ಈ ರೀತಿ ಖದೀಮರ ಪಾಲಾಗಿರುವ ಒಟ್ಟು ೨೩ ಪಾರಿವಾಳಗಳ ಅಂದಾಜು ಮೌಲ್ಯ ರೂ. ೩೬೦೦೦..!
ಹೌದು. ಇಂತಹ ವಿಲಕ್ಷಣ ಕಳ್ಳತನ ನಡೆದಿರುವುದು ಸುಂಟಿಕೊಪ್ಪದಲ್ಲಿ. ಇಲ್ಲಿನ ೨ನೇ ವಿಭಾಗದ ನಿವಾಸಿಯಾಗಿರುವ ಕೆ.ಹೆಚ್. ಅಬ್ಬಾಸ್ ಅವರ ಪುತ್ರ ತಮೀಮ್ ಎಂಬವರು ಕೆ.ಇ.ಬಿ. ಸಮೀಪ ಅಕ್ವೇರಿಯಂ ಅಂಗಡಿಯನ್ನು ನಡೆಸುತ್ತಿದ್ದಾರೆ. ಪಾರ್ಶ್ವವಾಯುಗೆ ಒಳಗಾದವರ ಚಿಕಿತ್ಸೆಗೆ ಔಷಧಿಯಾಗಿ ಉಪಯೋಗಿಸುವ ಬಿಳಿ ಪಾರಿವಾಳಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಕೆಲವೊಮ್ಮೆ ಸ್ಥಳೀಯವಾಗಿ ಬಿಳಿ ಪಾರಿವಾಳ ಸಿಗದಿದ್ದಾಗ ದೂರದ ಊರನ್ನು ಆಶ್ರಯಿಸಬೇಕಾಗುತ್ತದೆ. ಅಂತೆಯೇ ಇವುಗಳ ಬೆಲೆಯೂ ಕೂಡ ಕೊಂಚ ದುಬಾರಿಯಾಗಿದೆ. ತಮೀಮ್ ಅವರು ಮಾರಾಟ ಮಾಡಲೆಂದು ಕೇರಳದ ಮಾನಂದವಾಡಿಯಿAದ ಅಮೇರಿಕನ್ ಪ್ಯಾಂಟೈಲ್, ಆಸ್ಟೆçÃಲಿಯನ್ ಬ್ಲ್ಯಾಕ್ ಎಂಬಿತ್ಯಾದಿ ತಳಿಯ ೩೦ ಪಾರಿವಾಳಗಳನ್ನು ರೂ. ೩೬ ಸಾವಿರ ರೂ.ಗೆ ಖರೀದಿಸಿ ತಂದಿದ್ದರು.
ಆದರೆ ಅವುಗಳನ್ನು ಮಾರಾಟ ಮಾಡಲು ಮನಸ್ಸು ಒಪ್ಪದಿದ್ದರಿಂದ ತಮೀಮ್ ಮನೆಯ ಟೆರೇಸಿನಲ್ಲಿ ಗೂಡು ನಿರ್ಮಿಸಿ ಸಾಕಲಾರಂಭಿಸಿದ್ದರು. ಗೂಡಿನಿಂದ ಹೊರಗೆ ಬಿಟ್ಟರೆ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಚಿತ್ತಾರದ ಪಾರಿವಾರಗಳೇ ಇವರ ಒಡನಾಡಿಗಳಾಗಿದ್ದವು. ಆದರೆ ಈ ಪಾರಿವಾಳಗಳ ಮೇಲೆ ವಕ್ರದೃಷ್ಟಿ ಬೀರಿದ್ದ ಯಾರೋ ಖದೀಮರು ತಾ. ೧೪ರ ನಟ್ಟಿರುಳು ಮನೆಯವರೆಲ್ಲರೂ ಗಾಢ ನಿದ್ದೆಗೆ ಜಾರಿದ ಸಮಯ ಸಾಧಿಸಿ ಜನವಸತಿ ಪ್ರದೇಶದ ನಡುವೆ ಇರುವ ಮನೆಯ ಟೆರೇಸನ್ನೇರಿ ಗೂಡಿನ ಬೀಗ ಮುರಿದಿದ್ದಾರೆ. ಬಾಗಿಲು ತೆರೆಯುತ್ತಿದ್ದಂತೆ ೩೦ರ ಪೈಕಿ ೭ ಪಾರಿವಾಳಗಳು ಹೊರಗೆ ಹಾರಿ ಹೋಗಿವೆ. ಹೀಗಾಗಿ ಗೂಡಿನೊಳಗಿದ್ದ ೨೩ ಪಾರಿವಾಳಗಳನ್ನು ಅಪಹರಿಸಲಾಗಿದೆ. ಮರುದಿನ ಬೆಳಗ್ಗೆ ವಿಷಯ ಬಯಲಿಗೆ ಬಂದಿದೆ. ತನ್ನ ಒಡನಾಡಿಗಳನ್ನು ವಿಪರೀತವಾಗಿ ಮನಸ್ಸಿಗೆ ಹಚ್ಚಿಕೊಂಡಿದ್ದ ತಮೀಮ್ ಅವುಗಳು ಕಳ್ಳರ ಪಾಲಾಗಿರುವುದರಿಂದ ಚಿಂತಿತರಾಗಿದ್ದಾರೆ. ಮನೆಯ ಪರಿವಾರದಂತಿದ್ದ ಪಾರಿವಾಳಗಳು ಕಳ್ಳತನವಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪುಕಾರು ದಾಖಲಾಗಿದೆ.
-ಕ್ಯೂಟ್ ಕೂರ್ಗ್ ನ್ಯೂಸ್