* ಕೊಡವ ಹೆರಿಟೇಜ್ ಡಿಸೆಂಬರ್ ಅಂತ್ಯದೊಳಗೆ ಪೂರ್ಣ * ವೀಣಾ ಪ್ರಶ್ನೆಗೆ ಸಚಿವರುಗಳ ಉತ್ತರ
ಮಡಿಕೇರಿ, ಸೆ. ೨೧: ಕೊಡವರು ಹಾಗೂ ಅರೆಭಾಷೆ ಗೌಡರು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿರುವ ಹಿನ್ನೆಲೆ ಅವರ ಸರ್ವತೋಮುಖ ಅಭಿವೃದ್ಧಿಗೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಇದ್ದು, ಈ ನಿಗಮದ ಮೂಲಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಆದ್ದರಿಂದ ಕೊಡವ ಹಾಗೂ ಅರೆಭಾಷೆ ಜನಾಂಗ ಅಭಿವೃದ್ಧಿ ನಿಗಮ ಸ್ಥಾಪಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಸ್ಪಷ್ಟಪಡಿಸಿದ್ದಾರೆ.
ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಕೊಡವರ ಭಾಷೆ ಹಾಗೂ ಜನಾಂಗ ಅಭಿವೃದ್ಧಿಗೆ ಕೊಡವ ಜನಾಂಗ ಅಭಿವೃದ್ಧಿ ನಿಗಮ ಹಾಗೂ ಒಕ್ಕಲಿಗರ ಅಭಿವೃದ್ಧಿ ನಿಗಮದ ಮೂಲಕ ಅರೆಭಾಷೆ ಗೌಡ ಜನಾಂಗದ ಅಭಿವೃದ್ಧಿಗೆ ಸೂಕ್ತ ಕಾರ್ಯಕ್ರಮ ರೂಪಿಸಬೇಕೆಂದು ಮನವಿ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ಸಚಿವರು ಈಗಾಗಲೇ ಸ್ಥಾಪನೆಯಾಗಿರುವ ಒಕ್ಕಲಿಗರ ಅಭಿವೃದ್ಧಿ ನಿಗಮದ ಮೂಲಕ ಅರೆಭಾಷೆ ಗೌಡ ಜನಾಂಗದ ಅಭಿವೃದ್ಧಿಗಾಗಿ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಲು ಅವಕಾಶವಿಲ್ಲ ಎಂದು ತಿಳಿಸಿದರು.
ಕೊಡವ ಹೆರಿಟೇಜ್ ಕಾಮಗಾರಿ
ಕೊಡವ ಹೆರಿಟೇಜ್ ಕಾಮಗಾರಿ ತಡವಾಗುತ್ತಿರುವ ಬಗ್ಗೆ ವೀಣಾ ಅಚ್ಚಯ್ಯ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು, ಮಡಿಕೇರಿಯ ಹೆರಿಟೇಜ್ ಕಟ್ಟಡದ ಕಾಮಗಾರಿಗೆ ಸಂಬAಧಿಸಿದAತೆ ಪ್ರಸ್ತುತ ಐನ್ಮನೆಗಳ ಮೇಲ್ಚಾವಣಿ ಕೆಲಸ ಪೂರ್ಣಗೊಂಡಿದ್ದು, ನೆಲಹಾಸು, ವಿದ್ಯುದೀಕರಣ ಹಾಗೂ ಇತರ ಕೆಲಸಗಳು ಪ್ರಗತಿಯಲ್ಲಿವೆ. ೨೦೧೦-೧೧ನೇ ಸಾಲಿನಲ್ಲಿ ಅನುಮೋದನೆಗೊಂಡ ಕಾಮಗಾರಿಯನ್ನು ಪೂರ್ಣಗೊಳಿಸಲು ಗುತ್ತಿಗೆದಾರರು ವಿಫಲಗೊಂಡ ಕಾರಣ ಗುತ್ತಿಗೆ ಕರಾರನ್ನು ಗುತ್ತಿಗೆದಾರರ ಹೊಣೆ ಮತ್ತು ಜವಾಬ್ದಾರಿ ಮೇಲೆ ರದ್ದುಗೊಳಿಸಲಾಗಿರುತ್ತದೆ. ಉಳಿಕೆ ಕಾಮಗಾರಿ ಟೆಂಡರ್ ಕರೆದು ಗುತ್ತಿಗೆ ವಹಿಸಲಾಗಿದ್ದು, ೨೦೨೧ರ ಡಿಸೆಂಬರ್ನೊಳಗೆ ಕಾಮಗಾರಿ ಪೂರ್ಣಗೊಳಿಸಲು ಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಕಾಮಗಾರಿಯು ಅಂದಾಜು ಮೊತ್ತ ರೂ ರೂ. ೩.೩೦ ಕೋಟಿಯಾಗಿದ್ದು, ಇದುವರೆಗೂ ರೂ ೨.೫೩ ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.