ಮಡಿಕೇರಿ, ಸೆ. ೨೧: ಕೊಡಗು-ಕೇರಳ ಗಡಿ ಪ್ರದೇಶದ ಮಾಕುಟ್ಟ ಹಾಗೂ ಕುಟ್ಟದ ಕೋವಿಡ್-೧೯ ಚೆಕ್ ಪೋಸ್ಟ್ಗಳಿಗೆ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಪ್ರವೀಣ್ ಮಧುಕರ್ ಪವಾರ್ ಭೇಟಿ ನೀಡಿದರು.
ಚೆಕ್ಪೋಸ್ಟ್ ಪರಿಶೀಲನೆ ನಡೆಸಿದ ಅವರು, ಕರ್ತವ್ಯದಲ್ಲಿದ್ದ ಅಧಿಕಾರಿಗಳಿಂದ ತಪಾಸಣಾ ಕಾರ್ಯದ ಬಗ್ಗೆ ಮಾಹಿತಿ ಪಡೆದರು. ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಮುಖ ಕೊಡಗು-ಕೇರಳ ಗಡಿಪ್ರದೇಶಗಳಾದ ಮಾಕುಟ್ಟ, ಕುಟ್ಟ ಮತ್ತು ಕರಿಕೆ ಗೇಟ್ಗಳಲ್ಲಿ ಕೋವಿಡ್ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದ್ದು, ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕೆಂದು ಸೂಚನೆ ನೀಡಿದರು.
ತಪಾಸಣಾ ಕೇಂದ್ರದಲ್ಲಿ ದಿನದ ೨೪ ಗಂಟೆಯೂ ಪೊಲೀಸ್, ಕಂದಾಯ ಮತ್ತು ಆರೋಗ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು. ಎಲ್ಲಾ ವಾಹನಗಳು ಹಾಗೂ ಸಾರ್ವಜನಿಕರನ್ನು ತಪಾಸಣೆ ಮಾಡಿ ದಾಖಲೆಗಳನ್ನು ಪರಿಶೀಲಿಸಿ ಸರ್ಕಾರದ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರವೀಣ್ ಮಧುಕರ್ ಪವಾರ್ ತಿಳಿಸಿದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಈ ಸಂದರ್ಭ ಹಾಜರಿದ್ದರು