ಮಡಿಕೇರಿ, ಸೆ. ೨೨: ಕೂಡ್ಲೂರು ಕೈಗಾರಿಕಾ ಪ್ರದೇಶದ ೨೫೦ ಎಕರೆ ಭೂಮಿಯನ್ನು ಕೆ.ಐ.ಎ. ಡಿ.ಬಿ. ಮೂಲಕ ಅಭಿವೃದ್ಧಿ ಪಡಿಸಲಾಗಿದೆ ಎಂದು ಅಧಿವೇಶನದಲ್ಲಿ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪ್ರಶ್ನೆಗೆ ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ. ನಾಗರಾಜು ಉತ್ತರಿಸಿದರು.

ಕೊಡಗು ಜಿಲ್ಲೆಯಲ್ಲಿ ಕೈಗಾರಿಕೆ ಘಟಕದ ಉದ್ದೇಶಕ್ಕಾಗಿ ಎಲ್ಲಿ, ಎಷ್ಟು ಜಾಗವನ್ನು ಕಾಯ್ದಿರಿಸಲಾಗಿದೆ. ಕೈಗಾರಿಕೆ ಅಭಿವೃದ್ಧಿಗೆ ಕೈಗೊಂಡ ಕ್ರಮಗಳ ಬಗ್ಗೆ ರಂಜನ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಕೊಡಗಿನಲ್ಲಿ ಕೈಗಾರಿಕ ಘಟಕಗಳ ಉದ್ದೇಶಕ್ಕಾಗಿ ಹೊಸದಾಗಿ ಯಾವುದೇ ಭೂಮಿಯನ್ನು ಗುರುತಿಸಿಲ್ಲ ಹಾಗೂ ಭೂಸ್ವಾಧೀನ ಪ್ರಕ್ರಿಯೆ ನಡೆಸಿಲ್ಲ. ಕುಶಾಲನಗರದ ಕೂಡ್ಲೂರು ಕೈಗಾರಿಕ ಪ್ರದೇಶದಲ್ಲಿ ವಿವಿಧ ಕೈಗಾರಿಕೆಗಳಿಗೆ ನಿವೇಶನ ಗಳನ್ನು ಹಂಚಿಕೆ ಮಾಡ ಲಾಗಿವೆ ಎಂದು ಮಾಹಿತಿ ನೀಡಿದರು.

ಜಾಗ ನೀಡಲು ಅನುಸರಿಸುವ ಮಾನದಂಡದ ಬಗ್ಗೆ ಪ್ರಶ್ನೆಗೆ ವಿವರ ನೀಡಿದ ಸಚಿವರು, ಸಣ್ಣ ಮತ್ತು ಮಧ್ಯಮ ಕೈಗಾರಿಕ ಯೋಜನೆಗಳನ್ನು ಅನುಮೋದಿಸಲು ಮತ್ತು ನಿವೇಶನ ಹಂಚಿಕೆಗಾಗಿ ಸರಕಾರ ೨ ಸಮಿತಿಗಳನ್ನು ರಚಿಸಿದೆ. ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಜಿಲ್ಲಾ ಮಟ್ಟದ ಏಕಾಗವಾಕ್ಷಿ ಸಮಿತಿಯಲ್ಲಿ ರೂ. ೧೫ ಕೋಟಿಗಿಂತ ಕಡಿಮೆ ಯೋಜನಾ ವೆಚ್ಚದ ೨ ಎಕರೆಗಿಂತ ಕಡಿಮೆ ವಿಸ್ತಿçÃðಣದ ನಿವೇಶನ ಅವಶ್ಯವಿರುವ ಯೋಜನೆಗಳನ್ನು ಪರಾಮರ್ಶಿಸಿ ಅವುಗಳಿಗೆ ಅಗತ್ಯವಿರುವ ನಿವೇಶನ ಹಂಚಿಕೆ ಮಾಡಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಶಿಫಾರಸ್ಸು ಮಾಡಲಾಗುತ್ತದೆ ಎಂದರು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಅಧ್ಯಕ್ಷರಾಗಿರುವ ರಾಜ್ಯ ಮಟ್ಟದ ಏಕ ಗವಾಕ್ಷಿ ಸಮಿತಿಯಲ್ಲಿ ರೂ. ೧೫ ಕೋಟಿ ಮೇಲ್ಪಟ್ಟು ರೂ. ೫೦೦ ಕೋಟಿಗಿಂತ ಕಡಿಮೆ ಯೋಜನಾ ವೆಚ್ಚದ ಯೋಜನೆಗಳಿಗೆ ಮತ್ತು ಅವುಗಳಿಗೆ ಅಗತ್ಯವಾದ ನಿವೇಶನವನ್ನು ಲ್ಯಾಂಡ್ ಆಡಿಟ್ ಕಮಿಟಿಯಲ್ಲಿ ಪರಾಮರ್ಶಿಸಿ ಹಂಚಿಕೆ ಮಾಡಲು ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿಗೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ವಿವರ ನೀಡಿದರು.