ವೀರಾಜಪೇಟೆ, ಸೆ. ೨೦: ಮನೆಯ ಸಾಕು ನಾಯಿಯು ನೆರೆ ಮನೆಯ ಮಂದಿಗೆ ಉಪಟಳ ನೀಡುತ್ತಿದೆ ಎಂದ ಕಾರಣಕ್ಕೆ ಈರ್ವರಿಂದ ಹಲ್ಲೆ ನಡೆದು ಓರ್ವ ಆಸ್ಪತ್ರೆಗೆ ದಾಖಲಾದ ಘಟನೆ ನಗರದ ಹರಿಕೇರಿಯಲ್ಲಿ ನಡೆದಿದೆ. ವೀರಾಜಪೇಟೆ ನಗರದ ಸುಣ್ಣದ ಬೀದಿ ಹರಿಕೇರಿ ನಿವಾಸಿ ಬ್ರಿಜೇಶ್ (೨೩) ಹಲ್ಲೆಗೆ ಒಳಗಾಗಿ ಗಾಯ ಗೊಂಡು ಆಸ್ಪತ್ರೆಗೆ ದಾಖಲಾದ ವ್ಯಕ್ತಿ.
ಹರಿಕೇರಿಯ ನಿವಾಸಿ ಬ್ರಿಜೇಶ್ ಮನೆಯಲ್ಲಿ ನಾಯಿ ಸಾಕುತ್ತಿದ್ದ, ಸಾಕು ನಾಯಿಯು ಮನೆಯ ಸನಿಹದ ಇತರ ಮಂದಿಗಳಿಗೆ ಉಪಟಳ ನೀಡುತಿತ್ತು ಎನ್ನಲಾಗಿದೆ. ನೆರೆಮನೆಯಲ್ಲಿ ವಾಸವಿದ್ದ ಪರಶುರಾಮ ಅವರ ಮಗಳು ಅಂಗಳದಲ್ಲಿ ಆಟವಾಡುತಿದ್ದ ಸಮಯ ಸಾಕು ನಾಯಿ ದಾಳಿ ಮಾಡಿದೆ. ಘಟನೆಯಿಂದ ಕುಪಿತನಾದ ಪರಶುರಾಮ ನಾಯಿಗೆ ಕಲ್ಲಿನಿಂದ ಹೊಡೆದಿದ್ದಾನೆ. ಇದನ್ನು ನೋಡಿದ ಬ್ರಿಜೇಶ್ ಕಲ್ಲಿನಿಂದ ಸಾಕು ನಾಯಿಗೆ ಹೊಡೆದ ಬಗ್ಗೆ ಕೇಳಿದ್ದಾನೆ. ಈರ್ವರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಜಗಳವಾಗುತ್ತಲೆ ಲವ ಎಂಬುವವನ ಮಧ್ಯ ಪ್ರವೇಶವಾಗಿದೆ. ಪರಶುರಾಮ ತನ್ನ ಕೈಯಲ್ಲಿದ್ದ ಬಿಯರ್ ಬಾಟಲ್ ನಿಂದ ಬ್ರಿಜೇಶ್ ನ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಮುಖದ ಭಾಗಕ್ಕೆ ಗಾಯಗಳಾಗಿವೆ. ಲವ ಕ್ರಿಕೆಟ್ ಬ್ಯಾಟ್ನಿಂದ ಬ್ರಿಜೇಶ್ ನ ಮೇಲೆ ಪ್ರಹಾರ ಮಾಡಿದ್ದಾನೆ. ಗಾಯಗೊಂಡ ಬ್ರಿಜೇಶ್ ವೀರಾಜಪೇಟೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದಾನೆ.
ಪ್ರಕರಣಕ್ಕೆ ಸಂಬAಧಿಸಿದAತೆ ವೀರಾಜಪೇಟೆ ನಗರ ಠಾಣೆಯಲ್ಲಿ ಗಾಯಾಳು ಬ್ರಿಜೇಶ್ ನೀಡಿದ ದೂರಿನ ಅನ್ವಯ ಪರಶುರಾಮ ಮತ್ತು ಲವ ಎಂಬುವವರ ಮೇಲೆ ಹಲ್ಲೆ ಕೊಲೆಗೆ ಯತ್ನ ಪ್ರಕರಣ ದಾಖಲಾಗಿದ್ದು, ಪ್ರಕರಣದ ಆರೋಪಿ ಪರಶುರಾಮ ಎಂಬುವ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಪ್ರಕರಣದ ಮತ್ತೋರ್ವ ಆರೋಪಿ ಲವ ತಲೆ ಮರೆಸಿಕೊಂಡಿದ್ದಾನೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
-ಕೆ.ಕೆ.ಎಸ್