ಮಡಿಕೇರಿ, ಸೆ. ೨೦: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ದೇವಾಲಯ ನೆಲಸಮ ವಿಚಾರ ಅತ್ಯಂತ ಗಂಭೀರ ಚರ್ಚೆ ಹಾಗೂ ವಿರೋಧಕ್ಕೆ ಕಾರಣವಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯದ ಹಲವೆಡೆ ದೇವಾಲಯಗಳನ್ನು ಕೆಡವಿ ಹಾಕಿರುವ ವಿಚಾರ ಉಗ್ರರೂಪ ತಾಳಿತು. ಕೊಡಗು ಜಿಲ್ಲೆಯಲ್ಲಿಯೂ ಕೂಡ ಒಟ್ಟು ೫ ದೇವಾಲಯಗಳು ಕೆಡವಿ ಹಾಕುವ ಪಟ್ಟಿಯಲ್ಲಿವೆ. ಈ ಪೈಕಿ ೨ ದೇವಾಲಯಗಳನ್ನು ಕೆಲವು ವರ್ಷಗಳ ಹಿಂದೆಯೇ ನಿರ್ಮಾಣ ಹಂತದಲ್ಲಿಯೇ ತೆರವು ಮಾಡಲಾಗಿದೆ.

೨೦೦೯ರ ನಂತರ ನಿರ್ಮಾಣವಾದ ದೇವಾಲಯಗಳಿಂದ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆ, ಒತ್ತುವರಿ ದೇವಾಲಯಗಳನ್ನು ಕೆಡವಿ ಹಾಕಲು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಅದರಂತೆ ಜಿಲ್ಲಾಡಳಿತ ದೇವಾಲಯಗಳ ಪಟ್ಟಿ ಸಿದ್ಧಪಡಿಸಿದ್ದು, ಕೊಡಗಿನ ವೀರಾಜಪೇಟೆಯ ಗಣಪತಿ, ಗೌರಿಬಸವೇಶ್ವರ ದೇವಾಲಯಗಳು ಹಾಗೂ ಕುಶಾಲನಗರದ ಸಾಯಿಮಂದಿರವನ್ನು ಪಟ್ಟಿಯಲ್ಲಿ ಉಲ್ಲೇಖಿಸಿದೆ.

ಶತಮಾನಗಳ ದೇವಾಲಯ

ವೀರಾಜಪೇಟೆಯ ೨ ದೇವಾಲಯಗಳು ಕೂಡ ಶತಮಾನದ ಇತಿಹಾಸ ಹೊಂದಿರುವ ದೇವಾಲಯವಾಗಿವೆ. ಹಲವು ಭಕ್ತಾಧಿಗಳ ಶ್ರದ್ಧಾಕೇಂದ್ರವಾಗಿವೆ. ಆದರೆ, ೨೦೦೯ರ ನಂತರ ನಿರ್ಮಾಣವಾದ ದೇವಾಲಯಗಳಿಂದ ಸಮಸ್ಯೆಯಾದಲ್ಲಿ ಮಾತ್ರ ಅದನ್ನು ಕೆಡವಲು ಕೋರ್ಟ್ ನಿರ್ದೇಶನವಿರುವದರಿಂದ ಇವೆರಡು ದೇವಾಲಯಗಳು ರಕ್ಷಣೆಯಾಗಲಿವೆೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಕುಶಾಲನಗರ ವ್ಯಾಪ್ತಿಯ ಸಾಯಿ ಮಂದಿರವನ್ನು ಸ್ಥಳಾಂತರ ಮಾಡಲು ದೇವಾಲಯ ಆಡಳಿತ ಮಂಡಳಿ ಮುಂದಾಗಿದೆ. ಆದರಿಂದ ಕೊಡಗಿನಲ್ಲಿ ಯಾವುದೇ ರೀತಿಯ ದೇವಾಲಯ

(ಮೊದಲ ಪುಟದಿಂದ) ಕೆಡವಿ ಹಾಕುವ ಸಾಧ್ಯತೆ ಇಲ್ಲ ಎಂದು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ‘ಶಕ್ತಿ’ಗೆ ತಿಳಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ಮುಗಟಗೇರಿಯಲ್ಲಿ ಹಾಗೂ ಕೆದಮುಳ್ಳೂರಿನಲ್ಲಿ ನಿರ್ಮಾಣ ಹಂತದಲ್ಲಿ ೨ ಶ್ರದ್ಧಾಕೇಂದ್ರಗಳನ್ನು ತೆರವು ಮಾಡಲಾಗಿದೆ.

ಸರಕಾರದ ಮೂಲಕ ಅಫಿಡವಿಡ್

ಶತಮಾನಗಳ ಹಿನ್ನೆಲೆ ಇರುವ ಗಣಪತಿ, ಗೌರಿಬಸವೇಶ್ವರ ದೇವಾಲಯದ ರಕ್ಷಣೆ ಹಾಗೂ ಕುಶಾಲನಗರದ ಸಾಯಿಮಂದಿರ ಸ್ಥಳಾಂತರದ ಬಗ್ಗೆ ಜಿಲ್ಲಾಧಿಕಾರಿ ಸರಕಾರದ ಮೂಲಕ ನ್ಯಾಯಾಲಯಕ್ಕೆ ಅಫಿಡವಿಡ್ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರಬಾರದು ಎಂಬ ದೃಷ್ಟಿಕೋನದಲ್ಲಿ ಜಿಲ್ಲಾಡಳಿತ ಈ ನಡೆ ಅನುಸರಿಸುತ್ತಿದ್ದು, ಇದು ಸಮಾಜದ ಶಾಂತಿ ಕಾಪಾಡುವ ನಿಟ್ಟಿನಲ್ಲಿಯೂ ಕೂಡ ಸಹಕಾರಿಯಾಗಿದೆ. ವೀರಾಜಪೇಟೆ ದೇವಾಲಯಗಳಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಕೂಡ ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಸಾಯಿಮಂದಿರ ತೆರವು ವಿಚಾರವಾಗಿ ಜಿಲ್ಲಾಡಳಿತಕ್ಕೆ ಆಡಳಿತ ಮಂಡಳಿ ಪೂರಕ ಭರವಸೆ ನೀಡುತ್ತಿದೆ. ಕಾನೂನು ಪಾಲನೆಗೆ ನಾವು ಬದ್ಧ ಎಂದು ಹೇಳುತ್ತಿದ್ದಾರೆ. ಅವರಿಂದ ಯಾವುದೇ ವಿರೋಧವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆಯಷ್ಟೇ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಯಾವುದೇ ದೇವಾಲಯಗಳನ್ನು ಹಾಗೂ ಧಾರ್ಮಿಕ ಕೇಂದ್ರಗಳನ್ನೂ ಕೆಡವುದಿಲ್ಲವೆಂದು ಭರವಸೆ ನೀಡಿದ್ದಾರೆ. ಅಲ್ಲದೆ ಈ ಬಗ್ಗೆ ಸಚಿವ ಸಂಪುಟದಲ್ಲೂ ತೀರ್ಮಾನಿಸಲಾಗುವುದೆಂದು ಹೇಳಿದ್ದು, ಸಧ್ಯಕ್ಕೆ ಆಸ್ತಿಕರಿಗೆ ನೆಮ್ಮದಿ ತಂದಿದೆ. -ಹೆಚ್.ಜೆ. ರಾಕೇಶ್