ಸಿದ್ದಾಪುರ, ಸೆ. ೨೧: ಮಾಲ್ದಾರೆಯ ಖಾಸಗಿ ಕಾಫಿ ತೋಟವೊಂದರಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದೆ. ಮಾಲ್ದಾರೆಯ ಕಾಫಿ ಬೆಳೆಗಾರ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಖಜಾಂಚಿಯಾಗಿರುವ ಸಭಿತಾ ಭೀಮಯ್ಯ ಎಂಬವರ ಕಾಫಿ ತೋಟದಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದೆ ಎಂದು ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ತಿಳಿಸಿದ್ದಾರೆ.

ಮಂಗಳವಾರದAದು ಸಭಿತಾ ಅವರಿಗೆ ಸೇರಿದ ನಾಯಿಯೊಂದು ಮನೆಯ ಸಮೀಪ ಬೊಗಳುತ್ತಿತ್ತು. ಈ ಸಂದರ್ಭದಲ್ಲಿ ಅವರ ಪುತ್ರ ಕಾಫಿ ತೋಟದೊಳಗೆ ನೋಡಿದಾಗ ವನ್ಯಪ್ರಾಣಿಯ ಹೆಜ್ಜೆ ಗುರುತು ಪತ್ತೆಯಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಅಕ್ಕಪಕ್ಕದ ಕಾಫಿ ತೋಟಗಳಿಗೆ ತೆರಳಿ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದಾಗ ಇದು ಹುಲಿಯ ಹೆಜ್ಜೆ ಗುರುತು ಅಲ್ಲ, ಚಿರತೆಯ ಹೆಜ್ಜೆ ಗುರುತು ತಿಳಿದು ಬಂದಿದೆ ಎಂದು ವಲಯ ಅರಣ್ಯಾಧಿಕಾರಿ ಅಶೋಕ್ ‘ಶಕ್ತಿ’ಗೆ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಹುಲಿಯು ಕಾಣಸಿಗುತ್ತಿಲ್ಲ; ಮಾಲ್ದಾರೆಯ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದು, ಇದೀಗ ಚಿರತೆಯು ಕೂಡ ಕಾಫಿ ತೋಟಗಳಲ್ಲಿ ಓಡಾಡುತ್ತಿದ್ದು, ಗ್ರಾಮಸ್ಥರು ಹಾಗೂ ಕಾರ್ಮಿಕರು ಭಯಭೀತರಾಗಿದ್ದಾರೆ. -ವಾಸು