*ಅರಣ್ಯ ಸಚಿವರ ಭರವಸೆ

ಮಡಿಕೇರಿ, ಸೆ. ೨೧: ಸ್ವಂತ ಬಳಕೆಗೆ ಮರ ಕಡಿಯಲು ಕೋರಿ ಬಂದ ಪ್ರಸ್ತಾವನೆಗಳ ಬಗ್ಗೆ ಪರಿಶೀಲಿಸಿ ನಿಗದಿತ ಕಾಲವಧಿ ಯೊಳಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಮೇಲ್ಮನೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಪ್ರಶ್ನೆಗೆ ಅರಣ್ಯ ಸಚಿವ ಉಮೇಶ್ ವಿ. ಕತ್ತಿ ಭರವಸೆ ನೀಡಿದರು.

ಕೊಡಗು ಜಿಲ್ಲೆಯಲ್ಲಿ ರೈತರು ತಮ್ಮ ಕೃಷಿ ಭೂಮಿಯಲ್ಲಿರುವ ಮರಗಳನ್ನು ಕಡಿಯಲು ಅನುಮತಿಗೆ ಅವಕಾಶ ನೀಡದೆ. ಸ್ಥಳೀಯ ರೈತರನ್ನು ಅನೇಕ ಬಾರಿ ಕಚೇರಿಗೆ ಅಲೆದಾಡಿಸುತ್ತ ಕೆಳಹಂತದ ಅಧಿಕಾರಿಗಳಿಂದ ತೊಂದರೆಯಾಗಿರುವುದು ಸರಕಾರದ ಗಮನಕ್ಕೆ ಬಂದಿದೆಯೇ? ಬಂದಿದ್ದಲ್ಲಿ ಸರಕಾರದ ಕ್ರಮಗಳೇನೂ ಎಂದು ವಿವರ ಬಯಸಿದರು. ಮಲೆನಾಡಿನ ಪ್ರದೇಶಗಳಲ್ಲಿ ರೈತರು ತಮ್ಮ ಸ್ವಂತ ಬಳಕೆಗಾಗಿ ತಮ್ಮ ತೋಟ ಅಥವಾ ಕೃಷಿ ಭೂಮಿಯಲ್ಲಿರುವ ಮರಗಳನ್ನು ಕಡಿದು ಬಳಕೆ ಮಾಡಲು ಇರುವ ಸರಕಾರದ, ಅರಣ್ಯ ಇಲಾಖೆಯ ಆದೇಶ ಅಥವಾ ಸುತ್ತೋಲೆಗಳಿದ್ದಲ್ಲಿ ಅದರ ಬಗ್ಗೆ ಮಾಹಿತಿ ನೀಡಲು ಸುನಿಲ್ ಕೋರಿದರು.