ಮನೆ ಸಕ್ರಮಗೊಳಿಸಲು ಜಿಲ್ಲಾಧಿಕಾರಿಗಳಿಗೆ ಆದೇಶ

ಬೆಂಗಳೂರು, ಸೆ. ೨೦: ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ವಾಸದ ಮನೆಗಳನ್ನು ಸಕ್ರಮ ಮಾಡಿಕೊಡುವಂತೆ ಕೂಡಲೇ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನಸಭೆಗೆ ತಿಳಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ, ಲಾಲಾಜಿ ಮೆಂಡನ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದು ಕೇವಲ ಒಂದು ವಿಧಾನಸಭೆ ಕ್ಷೇತ್ರಕ್ಕೆ ಸೀಮಿತವಾದ ಸಮಸ್ಯೆಯಲ್ಲ. ರಾಜ್ಯದ ೨೨೪ ಕ್ಷೇತ್ರಗಳಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಈಗಾಗಲೇ ಸ್ವೀಕರಿಸಿರುವ ಅರ್ಜಿಗಳನ್ನು ಇತ್ಯರ್ಥಪಡಿಸಲು ೨೦೨೩ ಮಾರ್ಚ್ ವರೆಗೆ ಕಾಲಾವಕಾಶ ವಿಸ್ತರಣೆ ಮಾಡಲಾಗಿದೆ ಎಂದರು. ಈ ಹಂತದಲ್ಲಿ ಕಾಂಗ್ರೆಸ್, ಜೆಡಿಎಸ್. ಬಿಜೆಪಿ ಸದಸ್ಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಆಗುತ್ತಿರುವ ತೊಂದರೆಗಳನ್ನು ಸರ್ಕಾರದ ಗಮನಕ್ಕೆ ತಂದರು. ಕೇವಲ ಮನೆ ಕಟ್ಟಿದ ಜಾಗವನ್ನು ಮಾತ್ರ ಸಕ್ರಮ ಮಾಡದೇ ಮನೆಯ ಸುತ್ತ ಮುತ್ತ ಬಿಟ್ಟಿರುವ ಖಾಲಿ ಜಾಗವನ್ನು ಸಕ್ರಮ ಮಾಡಿಕೊಡಬೇಕು ಎಂದು ಸದಸ್ಯರು ಪಟ್ಟು ಹಿಡಿದು ಒತ್ತಾಯಿಸಿದರು. ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸಮೀಕ್ಷೆ ಮಾಡಿರುವ ಪ್ರಕಾರ, ೯ ಲಕ್ಷ ಹೆಕ್ಟೇರ್ ಡೀಮ್ಡ್ ಅರಣ್ಯ ಎಂದು ಘೋಷಿಸಿದೆ. ಈಗಾಗಲೇ ಎರಡೂ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ಮಾಡಿದ್ದು, ಆರು ಲಕ್ಷ ಹೆಕ್ಟೇರ್ ಪ್ರದೇಶವನ್ನು ಕಂದಾಯ ಇಲಾಖೆಗೆ ವಾಪಸ್ಸು ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದು, ಈ ಸಂಬAಧ ತಕ್ಷಣವೇ ಸುಪ್ರೀಮ್ ಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸುವುದಾಗಿ ಬಡವರಿಗೆ ಯಾವುದೇ ತೊಂದರೆಯಾಗದAತೆ ಸರ್ಕಾರ ನೋಡಿಕೊಳ್ಳಲಿದೆ ಎಂದು ಸಚಿವರು ತಿಳಿಸಿದರು.

ಬೆಲೆ ಏರಿಕೆಗೆ ಸರ್ಕಾರವನ್ನು ಬೊಟ್ಟು ಮಾಡಿ ತೋರಿಸಿ ದೂಷಿಸುವುದು ಸಮಂಜಸವಲ್ಲ: ಸಿಎಂ ಬೊಮ್ಮಾಯಿ

ಬೆಂಗಳೂರು, ಸೆ. ೨೦: ಬೆಲೆ ಏರಿಕೆ ಎಂಬುದು ನಿರಂತರ ಪ್ರಕ್ರಿಯೆ. ಇದಕ್ಕೆ ಯಾವುದೇ ಸರ್ಕಾರವನ್ನು ನಿರ್ದಿಷ್ಟವಾಗಿ ಬೊಟ್ಟು ಮಾಡಿ ತೋರಿಸಿ ದೂಷಣೆ ಮಾಡುವುದು ಸಮಂಜಸವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧಾನಸಭೆಯಲ್ಲಿಂದು ನಿಯಮ ೬೯ರ ಅಡಿ ನಡೆದ ಸುದೀರ್ಘ ಚರ್ಚೆಗೆ ಉತ್ತರಿಸಿದ ಅವರು, ಬೆಲೆ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ಕಾರಣ ಎಂಬ ವಿರೋಧ ಪಕ್ಷಗಳ ಟೀಕೆಯನ್ನು ಸಾರಾಸಗಟಾಗಿ ಅಂಕಿ- ಅಂಶಗಳ ಸಮೇತ ಸದನದ ಮುಂದಿಟ್ಟರು. ಈ ಹಂತದಲ್ಲಿ ಆಡಳಿತರೂಢ ಬಿಜೆಪಿ ಪ್ರತಿಪಕ್ಷವಾದ ಕಾಂಗ್ರೆಸ್ ಸದಸ್ಯರ ನಡುವೆ ಬಿಜೆಪಿ ಲೂಟ್-ಕಾಂಗ್ರೆಸ್ ಲೂಟ್, ಬಿಜೆಪಿಗೆ ಧಿಕ್ಕಾರ, ಕಾಂಗ್ರೆಸ್‌ಗೆ ದಿಕ್ಕಾರದ ಘೋಷಣೆಗಳು ಪರಸ್ಪರರ ಸದನದಲ್ಲಿ ಮೊಳಗಿದವು. ೧೯೭೩ರಿಂದ ೭೯ವರೆಗೆೆ ಪೆಟ್ರೋಲ್ ಬೆಲೆ ಮೂರು ರೂ. ಹೆಚ್ಚಿಗಾಯಿತು. ೭೯ ರಿಂದ ೮೬ರವರೆಗೆ ೩ ರೂ.ನಿಂದ ೮ ರೂ.ಯಷ್ಟು ಹೆಚ್ಚಾಯಿತು. ೮೩ ರಿಂದ ೯೩ ರವೆಗೆ ೧೫ ರೂ. ಹೆಚ್ಚಾಯಿತು. ೧೯೯೩ರಿಂದ ೨೦೦೦ವರೆಗೆ ೨೮ ರೂ.ಜಾಸ್ತಿಯಾಯಿತು. ೨೦೦೦ ದಿಂದ ೨೦೦೭ವರೆಗೆ ೪೮ ರೂ.ರಷ್ಟು ಬೆಲೆ ಹೆಚ್ಚಿತು. ಹೀಗೆ ಎಲ್ಲಾ ಸರ್ಕಾರಗಳ ಅವಧಿಯಲ್ಲಿ ತೈಲ ಬೆಲೆ ಹೆಚ್ಚಳವಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ನೂರು ಜನ ಬಂದರೂ ಬಿಜೆಪಿ ಉಳಿಸಲು ಸಾಧ್ಯವಿಲ್ಲ

ಬೆಂಗಳೂರು, ಸೆ. ೨೦: ಬೆಲೆ ಏರಿಕೆಯಿಂದ ಜನರ ಆಕ್ರೋಶ ಒಳಗೊಳಗೆ ಕುದಿಯುತ್ತಿದೆ. ಈ ಸರ್ಕಾರ ತೊಲಗಿದರೆ ಸಾಕು, ಮತ್ತೆ ಚುನಾವಣೆ ಬಂದರೆ ಸಾಕು ಎಂದು ಕಾಯುತ್ತಿದ್ದಾರೆ. ಒಬ್ಬ ಯಡಿಯೂರಪ್ಪ ಅಲ್ಲ, ಯಡಿಯೂರಪ್ಪ ಅವರಂತಹ ನೂರು ಜನ ಬಂದರೂ ಬಿಜೆಪಿಯನ್ನು ಉಳಿಸಲಿಕ್ಕೆ ಸಾಧ್ಯವಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಸರ್ಕಾರ ಕೇಸ್ ಹಾಕುತ್ತದೆ ಎಂಬ ಕಾರಣಕ್ಕೆ ಇದನ್ನೆಲ್ಲ ಸಹಿಸಿಕೊಂಡು ಜನ ಸುಮ್ಮನಿದ್ದಾರೆ. ನರೇಂದ್ರ ಮೋದಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಯಾರಿಂದಲೂ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಜನ ಬಿಜೆಪಿಯನ್ನು ಮನೆಗೆ ಕಳಿಸಿ, ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಹೇಳಿದ್ದಾರೆ. ಕೇಂದ್ರ ಸರಕಾರದ ನಿರಂತರ ಇಂಧನ ಬೆಲೆ ಹೆಚ್ಚಳ ಹಾಗೂ ತತ್ಪರಿಣಾಮವಾಗಿ ದಿನ ಬಳಕೆ ವಸ್ತುಗಳ ದರ ಏರಿಕೆ ಖಂಡಿಸಿ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ನಡೆದ ಸೈಕಲ್ ಜಾಥಾದಲ್ಲಿ ಭಾಗವಹಿಸಿದ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಸರ್ಕಾರ ಕೇಸ್ ಹಾಕುತ್ತೆ ಎಂಬ ಕಾರಣಕ್ಕೆ ಬೆಲೆಯೇರಿಕೆ ವಿರುದ್ಧ ಮಾತನಾಡದೆ ಜನ ಸುಮ್ಮನಿದ್ದಾರೆ. ಆದರೆ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಉಳಿಸಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಅವರು ಅಭಿಪ್ರಾಯ ಪಟ್ಟಿದ್ದಾರೆ. ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಮೇಲೆ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಜನರ ಜೇಬಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಹಾಕಿವೆ. ಈ ಹಿಂದೆ ಯು.ಪಿ.ಎ ಸರ್ಕಾರದ ಅವಧಿಯಲ್ಲಿ ಮನಮೋಹನ್‌ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಅಂತಾರಾಷ್ಟಿçÃಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ೧೨೦ ಡಾಲರ್ ಗಿಂತ ಹೆಚ್ಚಿದ್ದರೂ ದೇಶದಲ್ಲಿ ಡೀಸೆಲ್ ಬೆಲೆ ರೂ.೪೭ ಇತ್ತು ಇದೀಗ ನೂರರ ಗಡಿ ದಾಟಿದೆ ಎಂದು ಹೇಳಿದರು.