ಕಣಿವೆ, ಸೆ. ೨೧: ಪಟ್ಟಣ ಪಂಚಾಯಿತಿಯಾಗಿರುವ ಕುಶಾಲನಗರವನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಬೇಕೆಂದು ಆಗ್ರಹಿಸಿ ಕುಶಾಲನಗರದ ಬಿಜೆಪಿ ಕಾರ್ಯಕರ್ತರು ಹಾಗೂ ಪಂಚಾಯಿತಿ ಚುನಾಯಿತರ ನಿಯೋಗ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಬೆಂಗಳೂರಿನ ವಿಧಾನಸೌಧದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.
ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ಎಂಎಲ್ಸಿ ಸುನಿಲ್ ಸುಬ್ರಮಣಿ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ ನಿಯೋಗ, ಕುಶಾಲನಗರದಲ್ಲಿ ಈಗಾಗಲೇ ಪುರಸಭೆಯಾಗಿ ಮೇಲ್ದರ್ಜೆಗೇರಿ ಸುವಷ್ಟು ಪ್ರಮಾಣದ ಜನಸಂಖ್ಯೆಯನ್ನು ಹೊಂದಿದೆ. ಹಾಗೆಯೇ ಪಟ್ಟಣ ಪಂಚಾಯಿತಿ ವತಿಯಿಂದ ಪುರಸಭೆಗೆ ಅಗತ್ಯವಾದ ಪ್ರದೇಶ ಸರ್ವೆ ಮಾಡಿ ಗಡಿಗಳನ್ನು ಗುರುತಿಸಿ ನಕ್ಷೆ ತಯಾರಿಸಲಾಗಿದೆ. ಈಗಾಗಲೇ ಕುಶಾಲನಗರ ತಾಲೂಕು ಕೇಂದ್ರವಾಗಿಯೂ ಮಾರ್ಪಟ್ಟಿರುವುದ ರಿಂದ ಸರ್ಕಾರ ಕೂಡಲೇ ಪುರಸಭೆಯಾಗಿ ಕುಶಾಲನಗರವನ್ನು ಘೋಷಿಸಬೇಕೆಂದು ಮನವಿ ಮಾಡಿತು.
ಹಾಗೆಯೇ ಕೊಡಗು ಜಿಲ್ಲಾ ಕಾಫಿ ಬೆಳೆಗಾರರು ಕಾಫಿ ತೋಟಗಳಿಗೆ ಬಳಸುತ್ತಿರುವ ೧೦ ಹೆಚ್ಪಿ ವರೆಗಿನ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸದೇ ಉಚಿತ ವಿದ್ಯುತ್ ಪೂರೈಸಬೇಕು. ಹಾಗೆಯೇ ಈಗಾಗಲೇ ಬಾಕಿ ಇರುವ ಕೃಷಿಕರ ವಿದ್ಯುತ್ ಬಿಲ್ಅನ್ನು ಮನ್ನಾ ಮಾಡಬೇಕೆಂದು ಕೂಡ ಕಾಫಿ ಬೆಳೆಗಾರರ ಪರವಾಗಿ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿಗಳಲ್ಲಿ ಮನವಿ ಪತ್ರ ಸಲ್ಲಿಸಿದರು.
ಇದೇ ಸಂದರ್ಭ ಕಂದಾಯ ಮಂತ್ರಿ ಆರ್. ಅಶೋಕ್, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು, ಇಂಧನ ಸಚಿವ ಸುನಿಲ್ ಕುಮಾರ್ ಮತ್ತಿತರ ಸಚಿವರಿಗೂ ಇದೇ ಸಂದರ್ಭ ಪ್ರತ್ಯೇಕವಾದ ಮನವಿ ಪತ್ರಗಳನ್ನು ಸಲ್ಲಿಸಲಾಯಿತು. ಈ ಸಂದರ್ಭ ಬಿಜೆಪಿ ಪ್ರಮುಖರಾದ ಕೊಮಾರಪ್ಪ, ಎಂ.ವಿ. ನಾರಾಯಣ, ಕುಶಾಲನಗರ ಬಿಜೆಪಿ ಅಧ್ಯಕ್ಷ ಉಮಾಶಂಕರ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ, ಸದಸ್ಯ ಕೆ.ಜಿ. ಮನು, ಅಮೃತರಾಜು, ಏಳನೇ ಹೊಸಕೋಟೆಯ ದಾಸಂಡ ರಮೇಶ್, ಹೇರೂರಿನ ಬಿಜೆಪಿ ಯುವ ಮುಖಂಡ ಚಂದ್ರಶೇಖರ್, ಡಾ. ಶಶಿಕಾಂತ ರೈ, ಗೌತಮ್, ದಾಸಂಡ ಜಗದೀಶ್, ಕೋಟೇರ ಶಾಶ್ವತ್ ಬೋಪಣ್ಣ, ಕೊರವಂಡ ಸಂತೋಷ್, ಕೃಷ್ಣಪ್ಪ ಮೊದಲಾದವರಿದ್ದರು.