ಸುಂಟಿಕೊಪ್ಪ, ಸೆ. ೨೦: ಸುಂಟಿಕೊಪ್ಪ ಗ್ರಾ.ಪಂ. ವತಿಯಿಂದ ಇದೀಗ ಕಸ ನಿರ್ವಹಣೆಗೆ ೨ ಸಾವಿರ ಬಕೆಟ್ ನೀಡುವುದರ ಮೂಲಕ ವಿನೂತನ ಪ್ರಯತ್ನ ಮಾಡಿದೆ. ಸುಂಟಿಕೊಪ್ಪ ನಗರದ ಪ್ರತಿ ವಾರ್ಡ್ನ ಮನೆಗಳಿಗೆ, ಅಂಗಡಿಗಳಿಗೆ ೨ ಬಕೆಟ್ ನೀಡಿದ್ದು, ಇದರಲ್ಲಿ ಹಸಿ ಕಸ, ಒಣಕಸ ವಿಂಗಡಿಸಿ ನೀಡುವಂತೆ ನಾಗರಿಕರಿಗೆ ಹೊಸ ಆಡಳಿತ ಮಂಡಳಿ ಮನವಿ ಮಾಡಿದೆ.ನೂತನ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ಬಳಿಕ ಅಧ್ಯಕ್ಷೆ ಶಿವಮ್ಮ ಹಾಗೂ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಹಾಗೂ ಎಲ್ಲಾ ಸದಸ್ಯರು ಒಟ್ಟಾಗಿ ಸೇರಿ ಕಸ ನಿರ್ವಹಣೆಗೆ ಮುಂದಾಗಿದ್ದಾರೆ.

ಸುAಟಿಕೊಪ್ಪ ನಗರದ ೧ನೇ ವಾರ್ಡ್ನಿಂದ ಕಾರ್ಯಕ್ರಮವನ್ನು ಆಯೋಜಿಸಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದು, ಈಗಾಗಲೇ ಧ್ವನಿವರ್ಧಕದ ಮೂಲಕ ಪ್ರತಿ ವಾರ್ಡ್ಗಳಲ್ಲಿ ಪ್ರಚಾರ ಪಡಿಸಲಾಗಿದೆ. ರಸ್ತೆ ಬದಿಯಲ್ಲಿರುವ ಕಸದ ತೊಟ್ಟಿಯನ್ನು ತೆರವುಗೊಳಿಸ ಲಾಗುತ್ತಿದೆ. ತೊಟ್ಟಿಗಳಲ್ಲಿ ಹಾಕಿದ ಕಸವನ್ನು ನಾಯಿಗಳು ಎಳೆದು ರಸ್ತೆಗೆ ಹಾಕುತ್ತಿದ್ದು, ಇದರಿಂದ ನಗರವು ಮಾಲಿನ್ಯಗೊಳ್ಳುವುದನ್ನು ತಡೆಗಟ್ಟಲು ಮುಂದಾಗಿದ್ದು, ಪಂಚಾಯಿತಿ ವಾಹನ ಪ್ರತಿ ಮನೆಗೆ ತೆರಳಿ ಕಸ ಸಂಗ್ರಹದಲ್ಲಿ ತೊಡಗುವುದಾಗಿ ಅಭಿವೃದ್ಧಿ ಅಧಿಕಾರಿ ಮಾಹಿತಿ ನೀಡಿದರು. ಪ್ರತಿ ಮನೆ, ಅಂಗಡಿ ಯವರು ಕೈಜೋಡಿಸುವಂತೆ ಪಿಡಿಓ ವೇಣುಗೋಪಾಲ್ ಕೋರಿದ್ದಾರೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕಸ ಮುಕ್ತವಾಗಿಸುವ ಗುರಿ ಹೊಂದುವುದಾಗಿ ಪಂಚಾಯಿತಿ ಆಡಳಿತ ಮಂಡಳಿ ತಿಳಿಸಿದೆ.