ಪಿತೃಪಕ್ಷ ೨೧.೦೯.೨೦೨೧ ಮಂಗಳವಾರದಿAದ ೦೬.೧೦.೨೦೨೧ ಬುಧವಾರ ತನಕ ಆಗಲಿದ್ದು, ನಮ್ಮಿ ಸಂಸ್ಕೃತಿಯಲ್ಲಿ ಗತಿಸಿದ ಪಿತೃಗಳಿಗೆ ಪಿಂಡ ಪ್ರದಾನ, ಶ್ರಾದ್ಧಾದಿಗಳನ್ನು ಮಾಡುವ ಸಂಪ್ರದಾಯ ಪುರಾತನ ಕಾಲದಿಂದಲೂ ಅನೂಚಾನವಾಗಿ ನಡೆದು ಬಂದಿದೆ. ಪಿತೃಪಕ್ಷದಲ್ಲಿ ಈ ಕಾರ್ಯವನ್ನು ಮಾಡಿದರೆ ಅದರ ಪ್ರತಿಫಲವೇನು ಎಂಬುದರ ಬಗ್ಗೆ ಈ ಲೇಖನ.
ಪಿತೃಪಕ್ಷ: ಕರ್ಮಭೂಮಿ ಎನಿಸಿದ ಈ ಭರತ ಖಂಡದ ಸನಾತನ ಧರ್ಮಗಳಲ್ಲಿ ‘ಶ್ರಾದ್ಧ’ ಕರ್ಮವು ಮುಖ್ಯವಾಗಿದೆ. ಇದು ಅತ್ಯಂತ ಶ್ರೇಯಸ್ಕರವಾದ ಕರ್ಮವಾಗಿದೆ. ಇದಕ್ಕೆ ‘ಪಿತೃಯಜ್ಞ’ವೆಂದು ಕರೆಯುವದುಂಟು.
ಪಿತೃಪಕ್ಷದ ಮಹತ್ವವೇನು ಎನ್ನುವುದಾದರೆ, ಪ್ರತಿ ವೈದಿಕ ಕ್ರಿಯೆಯಲ್ಲೂ ಗತಿಸಿದ ಪಿತೃಗಳನ್ನು ಸ್ಮರಿಸಿ ‘ಪಿತೃದೇವತಾಂ ನಮಸ್ಕೃತ್ಯ' ಎಂದು ಅನುಗ್ರಹ ಪಡೆದು ವೈದಿಕ ಕ್ರಿಯೆ ಮುಂದುವರಿಸುವುದು ಸಂಪ್ರದಾಯ. ಪಿತೃದೇವತೆಗಳ ಅನುಕೂಲಕ್ಕಾಗಿ ಋಣಸಂದಾಯ ಮೂಲಕ ಕರ್ತವ್ಯ ಪಾಲನೆಗೆ ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆ (ಅ. ೬)ವರೆಗೆ ಬರುವ ಮಹಾಲಯ - ಈ ೧೫ ದಿನಗಳು ಪಿತೃಪಕ್ಷವೆನಿಸಿ, ಶ್ರಾದ್ಧಾವಿಧಿಗಳಿಗೆ ಪ್ರಾಶಸ್ತö್ಯ ಎಂದು ಹೇಳಿದೆ. ಯಾರು ಮಾತಾ-ಪಿತೃರ ಶ್ರಾದ್ಧವನ್ನು ಮಾಡುವುದಿಲ್ಲವೋ ಅವನು ಮಾಡುವ ದೇವತಾ ಕಾರ್ಯಗಳು, ಪೂಜೆ-ಪುನಸ್ಕಾರಗಳನ್ನು ದೇವತೆಗಳು ಸ್ವೀಕರಿಸುವುದಿಲ್ಲವೆಂದು ಶ್ರಾದ್ಧ ನಿಯಮದಲ್ಲಿ ಹೇಳಿದೆ.
ಪಿತೃಪಕ್ಷ ಅಶುಭವಲ್ಲ: ಪಿತೃಪಕ್ಷದಲ್ಲಿ ಯಾವುದೇ ದೇವತಾ ಕಾರ್ಯಗಳನ್ನಾಗಲಿ, ಮಂಗಲ ಕಾರ್ಯಗಳನ್ನಾಗಲಿ ಮಾಡುವುದು ಶ್ರೇಯಸ್ಕರ ಅಲ್ಲವೆಂಬ ಅಭಿಪ್ರಾಯವಿದೆ. ಗತಿಸಿದ ಕುಟುಂಬದ ಹಿರಿಯರು, ಮಾತಾ -ಪಿತರಿಗೆ ಶ್ರಾದ್ಧ ಪಿಂಡ ತರ್ಪಣ ನೀಡಿ, ದಿವ್ಯಾತ್ಮಗಳನ್ನು ತೃಪ್ತಿಪಡಿಸಿ, ಅಗಲಿದ ಚೈತನ್ಯಗಳಿಂದ ಅನುಗ್ರಹ ಪಡೆಯುವ ಪ್ರಶಸ್ತ ಕಾಲವೇ ಪಿತೃಪಕ್ಷ. ಹಾಗೆಂದೇ ಶ್ರಾದ್ಧ ಕ್ರಿಯೆಗೆ ಪ್ರಾಧಾನ್ಯ ನೀಡಲಾಗಿದೆ. ಪಿತೃ ಶ್ರಾದ್ಧದಲ್ಲಿ ವಾಯಸ ಬಲಿ ಎಂದು ಕಾಗೆಗಳಿಗೆ ಅನ್ನ ನೀಡುತ್ತಾರೆ.
ಶ್ರಾದ್ಧ ಎಂದರೇನು?: ನಮ್ಮ ಜನ್ಮಕ್ಕೆ ಕಾರಣರಾಗಿ, ನಮ್ಮನ್ನು ಹೆತ್ತು, ಹೊತ್ತು, ಸಾಕಿ, ಸಲಹಿ ನಮ್ಮ ಉದ್ಧಾರಕ್ಕೇ ಶ್ರಮಿಸಿ, ನಮ್ಮನ್ನಗಲಿ ಹೋದ ತಂದೆ-ತಾಯಿ, ಹಿರಿಯರು ಮುಂತಾದವರನ್ನು ಸ್ಮರಿಸಿ, ಅವರನ್ನು ಕುರಿತು ಶ್ರದ್ಧೆಯಿಂದ ಅನ್ನಜಲಾದಿಗಳನ್ನು ಕೊಡುವ ಪಿತೃಕಾರ್ಯಕ್ಕೆ ‘ಶ್ರಾದ್ಧ’ವೆಂದು ಹೆಸರು.
ಪಿತೃಗಳನ್ನುದ್ದೇಶಿಸಿ ಶ್ರದ್ಧೆಯಿಂದ ಕೊಡಲ್ಪಟ್ಟ ದ್ರವ್ಯವನ್ನು ಮಾನಸಿಕವಾಗಿ ಭಾವನೆಯಿಂದ ಮಾಡುವ ಆಚರಣೆ ಶ್ರಾದ್ಧವೆಂದು ಹೆಸರು.
ಒಟ್ಟಿನಲ್ಲಿ ಶ್ರದ್ಧೆಯಿಂದ ತನಗೆ ಪ್ರಿಯವಾದ ಭೋಜ್ಯಗಳನ್ನು ತನ್ನ ಪಿತೃಗಳನ್ನುದ್ದೇಶಿಸಿ ಕೊಡುವ ‘ಪಿಂಡಪ್ರದಾನ’ ಕ್ರಿಯೆಗೆ ಶ್ರಾದ್ಧವೆಂದು ಹೇಳುತ್ತಾರೆ.
ಇಲ್ಲಿ ಕೆಲವರು ಪ್ರಶ್ನೆ ಕೇಳುವುದುಂಟು -ನಮ್ಮನ್ನಗಲಿ ಹೋದ ಪಿತೃಗಳಿಗೆ ನಾವು ಕೊಡುವ ಜಲಾಂಜಲಿ, ಪಿಂಡಪ್ರದಾನದಿAದ ಅವರು ಹೇಗೆ ತೃಪ್ತರಾಗುತ್ತಾರೆ? ನಾವು ಇಲ್ಲಿ ಬ್ರಾಹ್ಮಣನಿಗೆ ದಾನವಾಗಿ ಕೊಟ್ಟದ್ದು ಪಿತೃಗಳಿಗೆ ಹೇಗೆ ತಲುಪುತ್ತದೆ?
ಉತ್ತರ: ನಾವು ಕೊಟ್ಟ ಅನ್ನವನ್ನು ಅಂದರೆ ಅದರ ಸಾರ ಭಾಗವನ್ನು ವಸು, ರುದ್ರ, ಆದಿತ್ಯ ತದಂತರ್ಗತ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಪ್ರದ್ಯುಮ್ನ, ಸಂಕರ್ಷಣ, ವಾಸುದೇವ ರೂಪಿ ಭಗವಂತನು ಸ್ವೀಕರಿಸಿ ಅದನ್ನು ನಮ್ಮ ಪಿತೃಗಳು ಯಾವ ಯೋನಿಯಲ್ಲಿ ಹುಟ್ಟಿ, ಎಲ್ಲಿ ಇರುವರೋ, ಅಲ್ಲಿ ಅವರಿಗೆ ಆಹಾರರೂಪವಾಗಿ ಸೂಕ್ತರೀತಿಯಲ್ಲಿ ಕೊಟ್ಟು ಸಂತೋಷ ಪಡಿಸುತ್ತಾನೆ ಭಗವಂತ.
ಯಥಾ ಧೇನುಸಹಸ್ರೇಷು
ವತ್ಸೋ ವಿಂದತಿ ಮಾತರಃ?
ತಥಾ ಪೂರ್ವಕೃತಂ
ಕರ್ಮ ಕರ್ತಾರಮನುವಿಂದತಿ?
ಸಾವಿರಾರು ಹಸುಗಳ ಹಿಂಡಿನಲ್ಲಿದ್ದರೂ ಕರು, ತನ್ನ ತಾಯಿ ಧೇನುವನ್ನು ಹುಡುಕಿಕೊಂಡು ಅದರ ಬಳಿಗೆ ಹೋಗುವಂತೆ, ಪೂರ್ವಜನ್ಮದ ಕರ್ಮವು ಮನುಷ್ಯನು ಎಲ್ಲಿದ್ದರೂ ಅವನನ್ನು ಹುಡುಕಿಕೊಂಡು ಹೋಗಿ ತಗಲುತ್ತದೆ.
ಕಾಗೆಗಳಿಗೂ ಪಿತೃಗಳಿಗೆ ಏನು ಸಂಬAಧ?
ಯೇ ಚ ಮದ್ವಿಷಯಸ್ಥಾವೈ ಮಾನವಾ ಕ್ಶುಧಯಾರ್ದಿತಾ: |
ತ್ವಯಿ ಭುಕ್ತೇ ಸುತ್ರುಸ್ತಾಪ್ತೆ ಭವಿಷ್ಯಂತಿ ಸಬಾಂಧವಾ : ||
ಯಮದೇವರು ಕಾಗೆಗಳಿಗೆ ದೀರ್ಘಾಯುಷ್ಯವನ್ನು ಕೊಟ್ಟು, ‘ನನ್ನ ಲೋಕದಲ್ಲಿ ಇರುವ ಪಿತೃಗಳು ನಿನ್ನ ಮೂಲಕ ಉಂಡು ತೃಪ್ತರಾಗಲಿ' ಎಂದು ಕಾಗೆಗಳಿಗೆ ನೀಡಿದ ವರ. ಅದಕ್ಕಾಗಿ ವಾಯಸ ಬಲಿ ರೂಢಿಯಲ್ಲಿದೇ.
ಈ ವಿಷಯ ರಾಮಾಯಣದಲ್ಲಿ ಬರುತ್ತದೆ. ಅದು ರಾವಣನ ಕಾಲ. ಅವನಿಗೆ ಹೆದರಿ ಎಲ್ಲಾ ದೇವತೆಗಳು ಒಂದು ಯಜ್ಞಕ್ಕೆ ಗೋಪ್ಯವಾಗಿ ಪಕ್ಷಿಗಳ ರೂಪದಿಂದ ಬಂದರು. ಆ ಯಜ್ಞವನ್ನು ಸೂರ್ಯ ವಂಶದಲ್ಲಿ ಬಂದ ಮರುತ್ ಎಂಬ ರಾಜ ಮಾಡುತ್ತಿದ್ದ. ದೇವೇಂದ್ರ ನವಿಲಾದ. ಬ್ರಹ್ಮದೇವರು ಹಂಸನಾದ. ಯಮ ಕಾಗೆಯಾದ. ಕೊನೆಯಲ್ಲಿ ತಮ್ಮ ಗೋಪ್ಯವನ್ನು ಕಾಪಾಡಿದ ಆ ಪಕ್ಷಿಗಳಿಗೆ ವರವನ್ನು ಕೊಟ್ಟರು.
ಕಾಗೆ ನಮಗೆ ಒಂದು ಸಂದೇಶ ನೀಡುತ್ತದೆ. ಕಾಗೆ ಕಾ-ಕ ಎಂದು ಕೂಗುತ್ತದೆ. ಸಂಸ್ಕೃತದಲ್ಲಿ ಕಾ ಅಂದರೆ ಯಾರು? ನೀನು ಯಾರು? ದೇವರು ಯಾರು? ನಿನ್ನ ಹಿಂದೆ ಬರುವವರು ಯಾರು? ಇದರ ಬಗ್ಗೆ ಜಿಜ್ಞಾಸೆ ಮಾಡು ಎಂದು ಪದೇ ಪದೇ ಅಧ್ಯಾತ್ಮದ ಅಂತರಾಳವನ್ನು ಹೇಳುವಂತಿದೆ.
-ಎಸ್.ಎಸ್. ಸಂಪತ್‌ಕುಮಾರ್, ಮಡಿಕೇರಿ.