ಕುಶಾಲನಗರ, ಸೆ. ೧೯: ನದಿಗಳ ಹಲವು ಆಯಾಮಗಳನ್ನು ಗುರುತಿಸಿ ಅದರ ಅಭಿವೃದ್ಧಿ ಪಡಿಸಿದಲ್ಲಿ ಮಾತ್ರ ನದಿ ಸಂರಕ್ಷಣೆ ಸಾಧ್ಯ ಎಂದು ಸಿಕೊ ಸಂಸ್ಥೆ ಮುಖ್ಯಸ್ಥ ಹಾಗೂ ನದಿ ಆರೋಗ್ಯ ತಜ್ಞ ಡಾ. ಹರೀಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಶಾಲನಗರ ಕಾವೇರಿ ನೀರಾವರಿ ನಿಗಮ ಹಾರಂಗಿ ಯೋಜನಾ ವೃತ್ತದ ಆಶ್ರಯದಲ್ಲಿ ಆಯೋಜಿಸಿದ್ದ ಇಂಜಿನಿಯರ್ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಹರೀಶ್ ಕುಮಾರ್ ಮಾತನಾಡಿ, ನದಿಗಳನ್ನು ಜೀವಂತವಾಗಿಟ್ಟುಕೊಳ್ಳಲು ನಿರಂತರ ಪ್ರಕ್ರಿಯೆಗಳು ಸಾಗಬೇಕಾಗಿದೆ. ನದಿ ನೀರಿನ ಗುಣಮಟ್ಟ ಕ್ಷೀಣಿಸಿದಲ್ಲಿ ನದಿಯ ಅವನತಿಯ ಹಂತ ತಲುಪುವ ಸಾಧ್ಯತೆಯಿದೆ. ನದಿಯನ್ನು ಬಳಕೆಗಷ್ಟೇ ಸೀಮಿತಗೊಳಿಸದೆ ಹಲವು ರೀತಿಯ ಆಯಾಮದಲ್ಲಿ ನೋಡಬೇಕಾಗಿದೆ ಎಂದರು.
ವಿಜ್ಞಾನಿ ಹಾಗೂ ಸಂವಹನಕಾರ ಎಂ.ಆರ್. ನಾಗರಾಜು ಮಾತನಾಡಿ, ಇಂಜಿನಿಯರ್ಗಳು ಸರ್ ಎಂ. ವಿಶ್ವೇಶ್ವರಯ್ಯ ಅವರ ರೀತಿಯಲ್ಲಿ ದೂರದೃಷ್ಟಿ ಚಿಂತನೆ ಜೊತೆಗೆ ನೆನಪಿಸಿಕೊಳ್ಳುವ ಯೋಜನೆಗಳನ್ನು ರೂಪಿಸಬೇಕು. ವೈದ್ಯರು ನಿಸರ್ಗಕ್ಕೆ ಚಿಕಿತ್ಸೆ ನೀಡುವಂತೆ ಇಂಜಿನಿಯರ್ಗಳು ಸಮುದಾಯಕ್ಕೆ ಸೇವೆ ಸಲ್ಲಿಸುವಂತಾಗಬೇಕು ಎಂದು ಕರೆ ನೀಡಿದರು.
ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಎನ್.ಬಿ. ಚನ್ನಕೇಶವ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯೋಜನಾ ವೃತ್ತದ ಇಂಜಿನಿಯರ್ಗಳು ಅಧಿಕಾರಿಗಳು, ಸಿಬ್ಬಂದಿ ಇದ್ದರು.
ನದಿ ಆರೋಗ್ಯ ವಿಷಯ ಕುರಿತಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ನದಿಯ ಮಾಲೀಕತ್ವ, ಕಲುಷಿತಗೊಳ್ಳುವುದು, ಕೊಡಗು ಜಿಲ್ಲೆಯಲ್ಲಿ ೩ ವರ್ಷಗಳ ಕಾಲ ನಿರಂತರ ನಡೆದ ಪ್ರಾಕೃತಿಕ ವಿಕೋಪದ ಬಗ್ಗೆ, ನೀರು ನಿರ್ವಹಣೆ, ಕೃಷಿ ಚಟುವಟಿಕೆ, ವಾಣಿಜ್ಯ ಕೃಷಿ ಚಟುವಟಿಕೆ, ಅಣೆಕಟ್ಟು ಕಾಲುವೆ ನಿರ್ವಹಣೆ ಬಗ್ಗೆ ಚರ್ಚೆಗಳು ನಡೆದವು.
ಚರ್ಚೆಯಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್, ಪರಿಸರ ಆಂದೋಲನ ಜಿಲ್ಲಾ ಸಂಚಾಲಕ ಟಿ.ಜಿ. ಪ್ರೇಮ್ಕುಮಾರ್ ಪಾಲ್ಗೊಂಡರು. ಹಾರಂಗಿ ಅಣೆಕಟ್ಟು ವಿಭಾಗದ ಅಧಿಕಾರಿ ಹೆಚ್.ಬಿ. ಸಿದ್ಧರಾಜು ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕಾರ್ಯ ನಿರ್ವಾಹಕ ಇಂಜಿನಿಯರ್ಗಳಾದ ಎನ್. ಸುಜಾತ, ಪಿ.ಎಂ. ಸುರೇಶ್, ಎಂ.ಡಿ. ನಾಗೇಶ್ ಮತ್ತಿತರರಿದ್ದರು.