ಮಡಿಕೇರಿ, ಸೆ. ೨೦: ಕೊಡಗು ಜಿಲ್ಲೆಯಲ್ಲಿ ಕೆರೆ, ಕಟ್ಟೆ, ಗೋಮಾಳ ಮತ್ತು ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ೧೪,೪೭೮ ಪ್ರಕರಣಗಳಿದ್ದು, ಸರಕಾರಿ ಜಮೀನಿನ ಒತ್ತುವರಿಯನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ತಿಳಿಸಿದ್ದಾರೆ.

ವಿಧಾನ ಮಂಡಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಅವರ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಮಡಿಕೇರಿ ತಾಲೂಕಿನಲ್ಲಿ ೪,೪೯೯ ಸೋಮವಾರಪೇಟೆ ತಾಲೂಕಿನಲ್ಲಿ ೭,೭೪೦ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ೨,೨೩೯ ಒತ್ತುವರಿ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದ್ದಾರೆ.

ಸರಕಾರಿ ಜಮೀನಿನ ಒತ್ತುವರಿಯನ್ನು ತೆರವುಗೊಳಿಸಲು ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದ್ದು, ಅದರಂತೆ ಎಲ್ಲಾ ಜಿಲ್ಲಾಧಿಕಾರಿಗಳು ಕಾಲಬದ್ಧ ಕ್ರಿಯಾಯೋಜನೆ ಸಿದ್ಧಪಡಿಸಿಕೊಂಡು ಒತ್ತುವರಿ ಆಗಿರುವ ಸರಕಾರಿ ಜಮೀನುಗಳನ್ನು ತೆರವುಗೊಳಿಸಲು ಕ್ರಮವಹಿಸುತ್ತಿದ್ದಾರೆ ಎಂದು ಅಶೋಕ್ ಅವರು ವಿವರಿಸಿದರು.

ವಿಶೇಷ ನ್ಯಾಯಾಲಯ ರಚನೆ

ಒತ್ತುವರಿ ಪ್ರಕರಣಗಳನ್ನು ಸಮರ್ಥವಾಗಿ ತಡೆಯುವ ಸಲುವಾಗಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವನ್ನು ರಚಿಸಲಾಗಿದ್ದು, ಒತ್ತುವರಿಗೆ ಸಂಬAಧಿಸಿದAತೆ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲು ಎಲ್ಲಾ ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ ವರ್ಗಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಒತ್ತವರಿದಾರರ ವಿರುದ್ಧ ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ರ ಕಲಂ ೧೯೨-ಎ ಅನ್ವಯ ಶಿಸ್ತು ಕ್ರಮಕೈಗೊಳ್ಳಲಾಗುತ್ತದೆ ಎಂದು ಸಚಿವರು ವಿವರಿಸಿದ್ದಾರೆ.

ಸರಕಾರದ ೨೦೨೦ರ ಜನವರಿ ೨೦ರ ಸುತ್ತೋಲೆಯನ್ವಯ ಸರಕಾರಿ ಜಮೀನು ಒತ್ತುವರಿದಾರರ ವಿರುದ್ಧ ಕ್ರಮ ಜರುಗಿಸಲು, ಒತ್ತುವರಿ ತೆರವುಗೊಳಿಸಲು ವಿಫಲವಾಗಿರುವ ಅಧಿಕಾರಿಗಳು, ಭೂ ಕಬಳಿಕೆಗೆ ದುಷ್ಪೆçÃರಣೆ ನೀಡಲು ನಕಲಿ ದಾಖಲೆಗಳನ್ನು ಸೃಷ್ಟಿಸಲು ಶಾಮೀಲಾಗಿರುವ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಕಾನೂನು, ಶಿಸ್ತು ಕ್ರಮಗಳನ್ನು ಜರುಗಿಸಲು ಸೂಚನೆ ನೀಡಲಾಗಿದೆ ಮತ್ತು ಅಂತಹವರ ವಿರುದ್ಧ ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ರ ಕಲಂ ೧೯೨(ಬಿ)ರನ್ವಯ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಸಚಿವರು ಭರವಸೆ ನೀಡಿದ್ದಾರೆ.

ಮರ ಕಡಿಯಲು ಅವಕಾಶ

ಮಲೆನಾಡಿನ ಪ್ರದೇಶಗಳಲ್ಲಿ ರೈತರು ತಮ್ಮ ಸ್ವಂತ ಬಳಕೆಗಾಗಿ ತಮ್ಮ ತೋಟ ಅಥವಾ ಕೃಷಿ ಭೂಮಿಯಲ್ಲಿನ ಮರಗಳನ್ನು ಕಡಿದು ಬಳಕೆ ಮಾಡುವ ಸಂಬAಧ ೨೦೧೪ರಲ್ಲೇ ಸರಕಾರ ಸುತ್ತೋಲೆಯನ್ನು ಹೊರಡಿಸಿದೆ. ಕೊಡಗು ವೃತ್ತದ ಮಡಿಕೇರಿ ಮತ್ತು ವೀರಾಜಪೇಟೆ ವಿಭಾಗಗಳಲ್ಲಿ ಸ್ವಂತ ಬಳಕೆಗೆ ಮರ ಕಡಿಯಲು ಕೋರಿ ಬಂದ ಪ್ರಸ್ತಾವನೆಗಳ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಸುನಿಲ್ ಸುಬ್ರಮಣಿ ಅವರ ಪ್ರಶ್ನೆಗೆ ಅರಣ್ಯ ಸಚಿವ ಉಮೇಶ್ ವಿ.ಕತ್ತಿ ಅವರು ಸ್ಪಷ್ಟಪಡಿಸಿದ್ದಾರೆ.