ಕೂಡಿಗೆ, ಸೆ. ೧೮: ಓಡಿಪಿ ಸಂಸ್ಥೆ ಮೈಸೂರು ಮತ್ತು ನಿಸರ್ಗ ರೈತ ಒಕ್ಕೂಟ ಇವರ ವತಿಯಿಂದ ಹೆಬ್ಬಾಲೆಯಲ್ಲಿ ನೊಂದಾಯಿತ ರೈತರಿಗೆ ಅರಿವು ಮತ್ತು ಜಾಲಭಂದ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಯನ್ನು ಕುಶಾಲನಗರ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಅರುಣ ನೆರವೇರಿಸಿ ಮಾತನಾಡಿ, ಸರಕಾರದಿಂದ ಕೃಷಿ ಇಲಾಖೆಯ ಮುಖೇನ ಸಿಗುವ ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಲು ಇರುವ ಯೋಜನೆಗಳ ಸಮರ್ಪಕ ಮಾಹಿತಿ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹೆಬ್ಬಾಲೆ ಸಹಕಾರ ಸಂಘದ ಅಧ್ಯಕ್ಷ ಪರಮೇಶ್ ರೈತರಿಗೆ ಪೂರಕವಾದ ಯೋಜನೆಯ ಸಾಲ ಸೌಲಭ್ಯಗಳನ್ನು ಒದಗಿಸಿ ಆರ್ಥಿಕವಾಗಿ ಸಹಕಾರ ನೀಡುವುದಾಗಿ ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ನಿಸರ್ಗ ರೈತ ಒಕ್ಕೂಟದ ಅಧ್ಯಕ್ಷ ಸ್ವಾಮಿ ವಹಿಸಿದ್ದರು. ಒಕ್ಕೂಟದ ಕಾರ್ಯದರ್ಶಿ ಬಿ.ಡಿ. ಶಿವರಾಂ, ಸಂಸ್ಥೆಯ ಸವಲತ್ತುಗಳನ್ನು ಪಡೆಯುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರಾದ ಸುಂದರದಾಸ್, ಮಮತಾ ಹಾಜರಿದ್ದರು.