ಶನಿವಾರಸಂತೆ, ಸೆ. ೧೮: ಪಟ್ಟಣದ ಕಂದಾಯ ಇಲಾಖೆ ಸಹಕಾರದೊಂದಿಗೆ ಕ.ರ.ವೇ. ತಾಲೂಕು ಘಟಕದ ಕಾರ್ಯಕರ್ತರು ಹೋಬಳಿಯ ೧೦ ಮಂದಿ ಫಲಾನುಭವಿಗಳಿಗೆ ವೃದ್ಧಾಪ್ಯ ವೇತನ ಮಾಡಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

೧೦ ಮಂದಿ ಪುರುಷ-ಮಹಿಳಾ ವೃದ್ಧರು ವೃದ್ಧಾಪ್ಯ ವೇತನ ಪಡೆಯಲು ತಿಳಿಯದೆ ಕ.ರ.ವೇ. ಕಾರ್ಯಕರ್ತರ ಮೊರೆ ಹೋದರು. ಕಾರ್ಯಕರ್ತರು ಫಲಾನುಭವಿಗಳಿಗೆ ಅಗತ್ಯವಿರುವ ಆಧಾರ್ ಕಾರ್ಡ್ ಮಾಡಿಸಿ, ಬ್ಯಾಂಕ್ ಖಾತೆ ತೆರೆಯಿಸಿ, ಸಂಬAಧಪಟ್ಟ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರು.

ಸ್ಪಂದಿಸಿದ ನಾಡ ಕಚೇರಿ ಉಪತಹಶೀಲ್ದಾರ್ ಮಧುಸೂದನ್, ಕಂದಾಯ ಪರಿವೀಕ್ಷಕ ಮಂಜುನಾಥ್ ಅರ್ಜಿಗಳನ್ನು ಪರಿಶೀಲಿಸಿ ಹೋಬಳಿ ವ್ಯಾಪ್ತಿಯ ಬಸವನಕೊಪ್ಪ, ಮಾದೇಗೋಡು, ರಾಮನಳ್ಳಿ, ನಂದಿಗುAದ ಹಾಗೂ ಗೋಪಾಲಪುರ ಗ್ರಾಮಗಳ ೧೦ ಫಲಾನುಭವಿ ವೃದ್ಧರಿಗೆ ವೃದ್ಧಾಪ್ಯ ವೇತನದ ಆದೇಶ ಪತ್ರಗಳನ್ನು ವಿತರಿಸಿದರು.

ಫಲಾನುಭವಿಗಳು, ಕ.ರ.ವೇ. ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಕಾರ್ಯದರ್ಶಿ ಪ್ರವೀಣ್, ಹೋಬಳಿ ಘಟಕದ ಅಧ್ಯಕ್ಷ ಆನಂದ್, ಗ್ರಾಮ ಘಟಕದ ಅಧ್ಯಕ್ಷ ಹರೀಶ್, ರಾಜಣ್ಣ ಇತರ ಕಾರ್ಯಕರ್ತರು ಹಾಜರಿದ್ದರು.