ಮಡಿಕೇರಿ, ಸೆ. ೧೮: ತಿತಿಮತಿ ವಲಯ ಅರಣ್ಯ ವ್ಯಾಪ್ತಿಯ ಸುತ್ತಮುತ್ತಲಿನಲ್ಲಿ ಖಾಸಗಿ ತೋಟಗಳಿಂದ ಬೀಟಿಮರಗಳು
ಕಳ್ಳ ಸಾಗಾಟವಾಗುತ್ತಿರುವ ಪ್ರಕರಣಗಳು ಮರುಕಳಿಸುತ್ತಿರುವ ಕುರಿತು ತಿಳಿದುಬಂದಿದೆ. ಈ ಕೃತ್ಯಗಳು ಅರಣ್ಯ ಇಲಾಖೆಯ ಮೂಗಿನಡಿಯಲ್ಲಿಯೇ ನಡೆಯುತ್ತಿದ್ದರೂ ಇದರ ವಿರುದ್ಧ ಯಾವುದೇ ಪ್ರಕರಣಗಳು ಮಾತ್ರ ದಾಖಲಾಗುತ್ತಿಲ್ಲ ಎನ್ನಲಾಗಿದೆ.
ಇದೀಗ ಕೆಲದಿನಗಳ ಹಿಂದೆ ಅಲ್ಲಿನ ಚೆನ್ನಂಗಿ ವಿಭಾಗದಲ್ಲಿ ಮುಖ್ಯ ರಸ್ತೆಯ ಬದಿಯಿಂದಲೇ ಭಾರೀ ಗಾತ್ರದ ಬೀಟಿ ಮರವೊಂದನ್ನು ಯಾರೋ ಅಪಹರಿಸಿದ್ದಾರೆ. ಇದು ಜನ-ವಾಹನ ಸಂಚಾರವಿರುವ ಮುಖ್ಯ ರಸ್ತೆಗೆ ಒತ್ತಿಕೊಂಡAತಿರುವ ಸ್ಥಳವಾಗಿದ್ದು, ಎಲ್ಲರಿಗೂ ಕಾಣುವಂತಹ ಪ್ರದೇಶವಾಗಿದೆ.
ಇದು ಖಾಸಗಿ ಸಂಸ್ಥೆಯೊAದಕ್ಕೆ ಸೇರಿರುವ ತೋಟವೆನ್ನಲಾಗಿದೆ. ಈ ತೋಟ ಮಾರಾಟಕ್ಕೆ ಇದೆ ಎಂಬ ಮಾತುಗಳಿದ್ದು, ಇಲ್ಲಿನ ಮರಗಳು ರಾತೋರಾತ್ರಿ ಕಣ್ಮರೆಯಾಗುತ್ತಿವೆ. ಇದರಲ್ಲಿ ಹಲವರ ಕೈಚಳಕವಿದೆ ಎಂಬ ಮಾತು ಕೇಳಿಬರುತ್ತಿದೆ.
ಈ ವಿಭಾಗದ ಸನಿಹದಲ್ಲಿಯೂ ಹಲವಾರು ಬೆಲೆಬಾಳುವ ಬೀಟಿ ಮರಗಳು ಅಪಹರಣವಾಗಿರುವು ದಾಗಿಯೂ ಹೇಳಲಾಗುತ್ತಿದೆ. ವಿಶೇಷವೆಂದರೆ ಕಾಡಾನೆ
ಸೇರಿದಂತೆ ವಿವಿಧ ವನ್ಯಪ್ರಾಣಿಗಳ ಹಾವಳಿಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾ ಸಿಬ್ಬಂದಿಗಳು ಇಲ್ಲೆಲ್ಲಾ ಸಂಚರಿಸುತ್ತಲೇ ಇರುತ್ತಾರೆ.
ಆದರೆ ಮರ ಕಳ್ಳತನದ ಬಗ್ಗೆ
ಮಾತ್ರ ಯಾವುದೇ ಕ್ರಮಗಳು-ಪ್ರಕರಣಗಳು ಮಾತ್ರ ದಾಖಲಾಗುತ್ತಿಲ್ಲ.
ಕೆಲ ದಿನದಿಂದೆ ಇಲ್ಲಿ ಕಡಿಯಲಾಗಿದ್ದ ಭಾರೀ ಗಾತ್ರದ ಬೀಟಿಮರ ಇದೀಗ ನಾಪತ್ತೆಯಾಗಿದ್ದು, ಮರದ ಬುಡ ಮಾತ್ರ ರಸ್ತೆ ಬದಿಯಲ್ಲೇ ಕಾಣುವಂತಿದೆ. ಈ ಬಗ್ಗೆ ಗಮನ ಹರಿಸಿ ಕ್ರಮಕೈಗೊಳ್ಳುವವರಾರು ಎಂಬದು ಪ್ರಶ್ನೆಯಾಗಿದೆ.
ಕೆಲವೊಂದು ಮೂಲಗಳ ಪ್ರಕಾರ ಹಲವು ಅಕ್ರಮ ವಹಿವಾಟು ನಡೆಸುತ್ತಿರುವವರು ಇದನ್ನು ನಡೆಸುತ್ತಿದ್ದಾರೆ. ಆದರೆ ಇಲಾಖೆಯವರು ಕಂಡೂ ಕಾಣದಂತಿರುವುದೇಕೆ ಎಂಬದು ಸಂಶಯಾಸ್ಪದವಾಗಿದೆ.