ಗೋಣಿಕೊಪ್ಪಲು, ಸೆ. ೧೮: ತನ್ನದೇ ಆದ ಇತಿಹಾಸ ಹೊಂದಿರುವ ಗೋಣಿಕೊಪ್ಪ ದಸರಾಕ್ಕೆ ಈ ಬಾರಿ ಕೂಡ ಕೊರೊನಾ ಕರಿನೆರಳು ಬಿದ್ದಿದ್ದು, ಆಚರಣೆ ಹೇಗೆ ಎಂಬ ಗೊಂದಲ ಮನೆ ಮಾಡಿದೆ.
ಗೋಣಿಕೊಪ್ಪದ ಹಿರಿಯರು ಸೇರಿ ಆರಂಭಿಸಿದ ಕಾವೇರಿ ದಸರಾ ಸಮಿತಿ ಕಳೆದ ೪೪ ವರ್ಷಗಳಿಂದ ಸತತವಾಗಿ ದಸರಾವನ್ನು ಸಾಂಪ್ರದಾಯಿಕವಾಗಿ ಆಚರಿಸುತ್ತ ಬರುತ್ತಿದೆ. ನವರಾತ್ರಿಗಳು ವಿವಿಧ ಕಾರ್ಯಕ್ರಮ ಮೂಲಕ ಸ್ಥಳೀಯರಿಗೆ ಮನರಂಜನೆ ನೀಡುತ್ತದೆ. ಮೈಸೂರು ದಸರಾದಲ್ಲಿ ಚಾಮುಂಡಿ ದೇವಿಯನ್ನು ಹೊರುವ ಅಂಬಾರಿಯದ್ದೆ ರೀತಿಯ ಮಾದರಿ ಅಂಬಾರಿಯಲ್ಲಿ ದೇವಿಯನ್ನು ಪ್ರತಿಷ್ಟಾಪಿಸಿ ನಿತ್ಯ ಪೂಜೆ ಸಲ್ಲಿಸಿ ವಿಜಯದಶಮಿಯಂದು ವಿಸರ್ಜಿಸಲಾಗುತ್ತದೆ. ಜೊತೆಗೆ ಸ್ತಬ್ಧಚಿತ್ರ, ದಶಮಂಟಪ ಕೂಡ ಗೋಣಿಕೊಪ್ಪ ದಸರಾದ ಆಕರ್ಷಕ ಕೇಂದ್ರಬಿAದುವಾಗಿದೆ.
ಆದರೆ, ಈ ಬಾರಿ ಆಚರಣೆ ಹೇಗೆ? ಎಂಬ ಗೊಂದಲ ಮೂಡಿದ್ದು, ಅನುದಾನ, ಕಾರ್ಯಕ್ರಮ ಆಯೋಜನೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಕಾವೇರಿ ದಸರಾ ಸಮಿತಿಯ ಆಶ್ರಯದಲ್ಲಿ ಈ ಬಾರಿ ೪೫ನೇ ದಸರಾ ಕಾರ್ಯಕ್ರಮ ಸರಳ ರೀತಿಯಲ್ಲಿ ನಡೆಯಲಿದೆ ಎಂದು ಕೆಲದಿನಗಳ ಹಿಂದೆ ನಡೆದ ಸಭೆಯಲ್ಲಿ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹೇಳಿದ್ದರು. ಪ್ರಸ್ತುತ ವಿದ್ಯಮಾನಗಳ ಬಗ್ಗೆ ಅವಲೋಕಿಸಿ, ಕೊಡಗಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕ್ಷೀಣಿಸಿದ್ದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಸುವುದು ಇಲ್ಲವಾದಲ್ಲಿ ಕೇವಲ ದೇವಿಯ ಪೂಜೆಗೆ ಸೀಮಿತವಾಗಿ ಸರಳ ದಸರಾ ಆಚರಣೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಸರ್ಕಾರದಿಂದ ಈ ಬಗ್ಗೆ ಅವಶ್ಯವಿರುವ ಅನುದಾನ ತರುವ ಭರವಸೆಯನ್ನು ಸಭೆಯಲ್ಲಿ ವ್ಯಕ್ತಪಡಿಸಿದ್ದರು.
ಜಿಲ್ಲೆಯಲ್ಲಿ ಕೋವಿಡ್ ಏರಿಳಿತಗಳು ಕಂಡು ಬಂದಿರುವುದ ರಿಂದ ಅದ್ಧೂರಿ ದಸರಾ ನಡೆಸಲು ಈ ಬಾರಿ ಸಾಧ್ಯವಾಗುವುದಿಲ್ಲ ಎಂದು ಕಾವೇರಿ ದಸರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಎನ್.ಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಾಸಕರು ಈಗಾಗಲೇ ಪೂರ್ವಭಾವಿ ಸಭೆಯಲ್ಲಿ ದಸರಾ ಆಚರಣೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯದಲ್ಲೇ ದಶÀ ಮಂಟಪಗಳ ಅಧ್ಯಕ್ಷರ ಸಭೆ ಕರೆದು ಚರ್ಚೆ ನಡೆಸಲಾಗುತ್ತದೆ ಎಂದು 'ಶಕ್ತಿ' ಗೆ ತಿಳಿಸಿದರು.
ಗೋಣಿಕೊಪ್ಪ ದಸರಾ ಕಾರ್ಯಕ್ರಮಕ್ಕೆ ಮೆರಗು ನೀಡಲು ಗೋಣಿಕೊಪ್ಪ ಒಂದನೇ ವಿಭಾಗದ ದಸರಾ ನಾಡ ಹಬ್ಬ ದಸರಾ ಸಮಿತಿ ನವರಾತ್ರಿ ದಿನದಂದು ಮಧ್ಯಾಹ್ನ ವೇಳೆ ನಗರದಲ್ಲಿ ಸ್ಧಬ್ದ ಚಿತ್ರ ಮೆರವಣಿಗೆ ಆಯೋಜಿಸುತ್ತಾ ಬಂದಿದೆ. ಈ ಬಾರಿ ಸರ್ಕಾರದ ಅನುದಾನ ಲಭ್ಯವಾದಲ್ಲಿ ಹಾಗೂ ಕೊವೀಡ್ ಇಳಿಮುಖ ಗೊಂಡಲ್ಲಿ ಈ ಬಗ್ಗೆ ಸಭೆ ಸೇರಿ ಚರ್ಚೆ ನಡೆಸಲಾಗುತ್ತದೆ ಎಂದು ಸಮಿತಿಯ ಅಧ್ಯಕ್ಷರಾದ ರಿಷಿ ಕಾವೇರಪ್ಪ ಮಾಹಿತಿ ಒದಗಿಸಿದರು.