ಸೋಮವಾರಪೇಟೆ, ಸೆ.೧೮: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ದಾನಿಗಳು ಸ್ಥಾಪಿಸಿರುವ ವಿವಿಧ ದತ್ತಿನಿಧಿ ಪ್ರಶಸ್ತಿಗಳನ್ನು, ತಾಲೂಕಿನ ೬ ಮಂದಿ ಪತ್ರಕರ್ತರಿಗೆ ಪ್ರದಾನ ಮಾಡಲಾಯಿತು.
ಇಲ್ಲಿನ ಸಫಾಲಿ ಸಭಾಂಗಣದಲ್ಲಿ ತಾಲೂಕು ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಾರ್ಷಿಕ ಪ್ರಶಸ್ತಿ ವಿಜೇತ ಪತ್ರಕರ್ತರಿಗೆ ಅತಿಥಿಗಳು ಪ್ರಶಸ್ತಿ ಪ್ರದಾನ ಮಾಡಿದರು.
ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ಅವರು ತಮ್ಮ ತಂದೆ-ತಾಯಿ ತೇಲಪಂಡ ಶಾರದಾ ಮತ್ತು ಸೋಮಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ಮೌಲ್ಯವುಳ್ಳ ವರದಿ ಪ್ರಶಸ್ತಿಯನ್ನು ಸೋಮವಾರಪೇಟೆಯ ‘ಶಕ್ತಿ’ ವರದಿಗಾರ ವಿಜಯ್ ಹಾನಗಲ್, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ತಮ್ಮ ತಂದೆ-ತಾಯಿ ಬಿ.ಕೆ.ಸುಬ್ಬಯ್ಯ - ಜಯಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ-ಪರಿಸರ ಮತ್ತು ವನ್ಯ ಜೀವಿ ವಿಭಾಗದ ಪ್ರಶಸ್ತಿಯನ್ನು ‘ಶಕ್ತಿ’ಯ ಕಣಿವೆ ವರದಿಗಾರ ಕೆ.ಎಸ್. ಮೂರ್ತಿ ಅವರುಗಳಿಗೆ ನೀಡಲಾಯಿತು.
ಕುಶಾಲನಗರದ ಪತ್ರಕರ್ತ ಎಂ.ಎನ್. ಚಂದ್ರಮೋಹನ್ ತಮ್ಮ ತಂದೆ ತಾಯಿ ಎಂ.ನಾರಾಯಣ ಮತ್ತು ಎಂ.ಪದ್ಮಾವತಿ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿಯನ್ನು ‘ಶಕ್ತಿ’ಯ ಕೂಡಿಗೆ ವರದಿಗಾರ ಕೆ.ಕೆ. ನಾಗರಾಜ ಶೆಟ್ಟಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್.ಹರೀಶ್ ಕುಮಾರ್ ತಮ್ಮ ತಂದೆ ಹೆಚ್.ಎಸ್.ರಾಮೇಗೌಡ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿಯನ್ನು ಸೋಮವಾರಪೇಟೆಯ ವಿಜಯಕರ್ನಾಟಕ ವರದಿಗಾರ ತೇಲಪಂಡ ಕವನ್ ಕಾರ್ಯಪ್ಪ ಅವರುಗಳು ಪಡೆದರು.
ಪತ್ರಕರ್ತರ ಸಂಘದ ರಾಷ್ಟಿçÃಯ ಮಂಡಳಿ ಸದಸ್ಯ ಎಸ್.ಎ.ಮುರುಳೀಧರ್ ತಮ್ಮ ತಂದೆ ಟಿ.ಪಿ. ಅಪ್ಪಸ್ವಾಮಿ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾವರದಿ ಪ್ರಶಸ್ತಿಯನ್ನು ಸುಂಟಿಕೊಪ್ಪದ ಪ್ರಜಾವಾಣಿ ವರದಿಗಾರ ಎಂ.ಎಸ್. ಸುನಿಲ್, ಕೂಗೂರಿನ ಯಶಸ್ವಿನಿ ಚಂದ್ರಕಾAತ್ ಅವರು, ತಮ್ಮ ತಂದೆ ಕೂಗೂರು ಗ್ರಾಮದ ತಿಮ್ಮಪ್ಪ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ದೃಶ್ಯಮಾಧ್ಯಮ ವರದಿ ಪ್ರಶಸ್ತಿಯನ್ನು ಚಿತ್ತಾರ ವಾಹಿನಿಯ ವರದಿಗಾರ ವಿಶ್ವ ಕುಂಬೂರು ಅವರುಗಳಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್ಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ ಮಾತನಾಡಿ, ಪತ್ರಕರ್ತರ ಸೇವೆಯನ್ನು ಸಮಾಜ ಗುರುತಿಸಬೇಕು. ಸರ್ಕಾರವೂ ಸಹ ಪತ್ರಕರ್ತರಿಗೆ ಸವಲತ್ತು ಒದಗಿಸುವಂತಾಗಬೇಕು ಎಂದರು.
ಮತ್ತೋರ್ವ ಅತಿಥಿ ಪ.ಪಂ. ಪ್ರಭಾರ ಅಧ್ಯಕ್ಷ ಬಿ.ಸಂಜೀವ ಮಾತನಾಡಿ, ಪಟ್ಟಣ ಪಂಚಾಯಿತಿಗೆ ೫ ಏಕರೆ ಜಾಗವನ್ನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಜಾಗ ದೊರಕಿದ್ದಲ್ಲಿ ಪತ್ರಕರ್ತರಿಗೂ ನಿವೇಶನ ನೀಡಲಾಗುವುದು. ಈಗಾಗಲೇ ಪಂಚಾಯಿತಿಯಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ೫೦ ಸಾವಿರ ರೂಪಾಯಿ ಮೀಸಲಿಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದರು
ಕಾರ್ಯಕ್ರಮವನ್ನು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತ ರೈ ಉದ್ಘಾಟಿಸಿ ಮಾತನಾಡಿ, ಪತ್ರಕರ್ತರ ಕುಟುಂಬದ ಮಕ್ಕಳು ಶೈಕ್ಷಣಿಕವಾಗಿ ಹೆಚ್ಚಿನ ಸಾಧನೆ ತೋರಬೇಕು ಎಂದು ಕಿವಿಮಾತು ನುಡಿದರು. ರಾಜ್ಯ ಪತ್ರಕರ್ತರ ಸಂಘದ ನಿರ್ದೇಶಕ ರಮೇಶ್ ಕುಟ್ಟಪ್ಪ ಮಾತನಾಡಿ, ಪತ್ರಕರ್ತರು ಸಮಾಜದ ಒಳಿತಿಗಾಗಿ ಸೇವೆ ಸಲ್ಲಿಸುತ್ತಿದ್ದು, ಹಲವಷ್ಟು ಒತ್ತಡದ ನಡುವೆಯೂ ಸಮಾಜದ ಕೈಗನ್ನಡಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಪತ್ರಕರ್ತರ ಸಂಘದ ರಾಷ್ಟಿçÃಯ ಮಂಡಳಿ ಸದಸ್ಯ ಎಸ್.ಎ. ಮುರಳೀಧರ್ ಪ್ರಸ್ತಾವಿಕವಾಗಿ ಮಾತನಾಡಿದರು. ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಎಸ್. ಮಹೇಶ್, ಕುಶಾಲನಗರ ಪತ್ರಕರ್ತರ ಸಂಘದ ಅಧ್ಯಕ್ಷ ರಘು ಹೆಬ್ಬಾಲೆ ಅವರುಗಳು ಉಪಸ್ಥಿತರಿದ್ದರು.