ವೀರಾಜಪೇಟೆ, ಸೆ. ೧೯: ವಿದ್ಯಾರ್ಥಿಗಳು ಜೀವನವನ್ನು ಉಜ್ವಲವಾಗಿ ರೂಪಿಸಿಕೊಳ್ಳಲು ಕಾಯ್ದೆ, ಕಾನೂನುಗಳ ಅರಿವು ಅತ್ಯಗತ್ಯ. ಸಮಾಜದಲ್ಲಿ ಕಾನೂನಿನ ಅರಿವು ಕೊರತೆಯಿಂದ ಸಮಾಜಘಾತುಕ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎನ್.ವಿ. ಕೋನಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ವೀರಾಜಪೇಟೆ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ವೀರಾಜಪೇಟೆ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ನಡೆದ ಪ್ರೌಢಶಾಲಾ ಮಕ್ಕಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಾಲ್ಯ ವಿವಾಹ ಹೆಚ್ಚುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಮಕ್ಕಳು ತಮ್ಮ ಸುತ್ತಮುತ್ತಲಿನಲ್ಲಿ ಬಾಲ್ಯವಿವಾಹ ನಡೆದರೆ ಸಂಬAಧಿಸಿದವರಿಗೆ ಮಾಹಿತಿ ನೀಡುವುದರ ಮೂಲಕ ನ್ಯಾಯಪಾಲನೆಯಲ್ಲಿ ತೊಡಗಬೇಕೆಂದರು. ಮಕ್ಕಳನ್ನು ದತ್ತು ತೆಗೆದುಕೊಳ್ಳುವಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಮಾತನಾಡಿ, ಮಕ್ಕಳು ತಮಗಾಗಿ ಇರುವ ವಿವಿಧ ಕಾನೂನು ಸೌಲಭ್ಯಗಳನ್ನು ಅರಿತುಕೊಂಡು ಕಲಿಕೆಯಲ್ಲಿ ತೊಡಗುವಂತೆ ಕಿವಿಮಾತು ಹೇಳಿದರು.

ವಕೀಲೆ ಅನುಪಮಾ ಕಿಶೋರ್ ಮಾತನಾಡಿ, ಮಕ್ಕಳಿಗೆ ಕಾನೂನು ಅರಿವಿನ ಅಗತ್ಯತೆಯನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಪರಿವೀಕ್ಷಕರಾದ ಗಾಯತ್ರಿ, ಉಪ ಪ್ರಾಂಶುಪಾಲೆ ಶಶಿಕಲಾ, ಇಸಿಓ ಅಯ್ಯಪ್ಪ ವಿಶಾಲಾಕ್ಷಿ, ಬಿಆರ್‌ಸಿಗಳಾದ ವಾಮನ ಸಿಆರ್‌ಪಿ ವೆಂಕಟೇಶ್, ಶ್ರೀನಿವಾಸ್ ನ್ಯಾಯಾಲಯದ ವಿವಿಧ ಅಧಿಕಾರಿ ವರ್ಗದವರು, ಪ್ರೌಢಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭ ಪ್ರೌಢಶಾಲಾ ಆವರಣದಲ್ಲಿ ಗಿಡ ನೆಡುವುದರೊಂದಿಗೆ ವಿದ್ಯಾರ್ಥಿಗಳಿಗೆ ಪರಿಸರ ಪ್ರಜ್ಞೆ ಮೂಡಿಸಲಾಯಿತು. ಕ್ಷೇತ್ರ ಸಮನ್ವಯಾಧಿಕಾರಿ ವನಜಾಕ್ಷಿ ಸ್ವಾಗತಿಸಿ, ಶಿಕ್ಷಕಿ ನಳಿನಿ ನಿರೂಪಿಸಿ, ನಸೀಮಾ ವಂದಿಸಿದರು.