ಚೆಟ್ಟಳ್ಳಿ, ಸೆ. ೧೮: ಚೆಟ್ಟಳ್ಳಿ ಗ್ರಾ.ಪಂ. ಕಟ್ಟಡದ ಹಿಂಬದಿಯ ಮುಖ್ಯರಸ್ತೆ ಬದಿಯ ಚರಂಡಿಯಲ್ಲಿ ನಿತ್ಯವು ರಕ್ತಮಿಶ್ರಿತ ನೀರು ಹರಿಯುತ್ತಿದೆ. ಈ ಬಗ್ಗೆ ಸಾರ್ವಜನಿಕ ರಿಂದ ಹಲವು ಬಾರಿ ದೂರುಗಳು ಬಂದರೂ ಚೆಟ್ಟಳ್ಳಿ ಗ್ರಾ.ಪಂ. ಸೂಕ್ತಕ್ರಮ ಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕರು ಹಾಗೂ ಗ್ರಾ.ಪಂ. ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಂಚಾಯಿತಿಯ ಕಟ್ಟಡದ ಕೆಳ ಅಂತಸ್ತಿನಲ್ಲಿ ಕೋಳಿ ಅಂಗಡಿಯಿದ್ದು, ಕೋಳಿಯನ್ನು ಶುಚಿಗೊಳಿಸಿದ ರಕ್ತಮಿಶ್ರಿತ ನೀರನ್ನು ಹಾಗೂ ತ್ಯಾಜ್ಯವನ್ನು ಪೈಪ್‌ನ ಮೂಲಕ ಮುಖ್ಯ ರಸ್ತೆಯಿಂದ ಶುಂಟಿಕೊಪ್ಪಕ್ಕೆ ತೆರಳುವ ರಸ್ತೆ ಬದಿಯ ಚರಂಡಿಗೆ ಬಿಡಲಾಗುತ್ತಿದೆ ಎಂದು ಸ್ಥಳೀಯ ಜಾಬೀರ್ ಹಾಗೂ ಹಲವರು ಪಂಚಾಯಿತಿಗೆ ದೂರು ಸಲ್ಲಿಸಿದ್ದಾರೆ.

ಪಂಚಾಯಿತಿಯವರು ಕ್ರಮ ಕೈಗೊಳ್ಳುತ್ತೇವೆಂದು ಭರವಸೆ ನೀಡಿದರೂ, ಈವರೆಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಕಾಡು ಮುಚ್ಚಿಹೋಗಿರುವ ಚರಂಡಿಯನ್ನು ಶುಚಿಗೊಳಿಸಿದರೂ ಕೋಳಿ ಅಂಗಡಿಯ ರಕ್ತ ಹಾಗೂ ಕೋಳಿ ತ್ಯಾಜ್ಯಗಳು ಚರಂಡಿಯಲ್ಲಿ ಹರಿದುಬ ರುತ್ತಿದೆ. ಇಂಗು ಗುಂಡಿಯನ್ನು ಮಾಡಿ ಕೋಳಿಯ ತ್ಯಾಜ್ಯ ಹೋಗಲು ವ್ಯವಸ್ಥೆ ಮಾಡಬೇಕಾಗಿದ್ದ ಪಂಚಾಯಿತಿಯ ಬಗ್ಗೆ ಚೆಟ್ಟಳ್ಳಿ ಗ್ರಾ.ಪಂ. ಸದಸ್ಯ ಬಲ್ಲಾರಂಡ ಕಂಠಿಕಾರ್ಯಪ್ಪ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಕಾಯಿಲೆಗಳಿಗೆ ಕಾರಣವಾಗುವ ಕೋಳಿತ್ಯಾಜ್ಯದ ಬಗ್ಗೆ ಚೆಟ್ಟಳ್ಳಿ ಪಂಚಾಯಿತಿ ತಲೆಕೆಡಿಸಿ ಕೊಳ್ಳದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

-ಪುತ್ತರಿರ ಕರುಣ್‌ಕಾಳಯ್ಯ