ಸೋಮವಾರಪೇಟೆ, ಸೆ. ೧೮: ಅಕ್ರಮವಾಗಿ ಬೀಟೆ ಮರವನ್ನು ಕಡಿದು ನಾಟಗಳನ್ನಾಗಿ ಪರಿವರ್ತನೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ನಾಕೂರು ಶಿರಂಗಾಲದ ಸುಬ್ಬರಾಜು ಟಿ.ಎಂ. (೪೫) ಬಂಧಿತ ಆರೋಪಿ, ಉಳಿದ ಇಬ್ಬರು ಆರೋಪಿತರುಗಳಾದ ಮಳೂರು ಗ್ರಾಮದ ಸಂದೀಪ್ ಎಂ.ಎಸ್. (೫೫), ಸುರೇಶ್ ಟಿ.ಕೆ (೪೮) ತಲೆಮರೆಸಿಕೊಂಡಿದ್ದು ಅವರುಗಳ ಪತ್ತೆಗೆ ಅರಣ್ಯ ಇಲಾಖೆ ಬಲೆ ಬೀಸಿದೆ.

ಸೋಮವಾರಪೇಟೆ ವಲಯದ ಹುದುಗೂರು ಶಾಖೆಯ ಯಡವನಾಡು ಮೀಸಲು ಅರಣ್ಯಕ್ಕೆ ಸೇರಿದ ಮಾವಿನಹಳ್ಳ ಎಂಬಲ್ಲಿ ಅಕ್ರಮವಾಗಿ ಬೀಟೆ ಮರವನ್ನು ಕಡಿದು ನಾಟಾಗಳನ್ನಾಗಿ ಪರಿವರ್ತಿಸಿ ತೆಪ್ಪಗಳ ಮೂಲಕ ಹಾರಂಗಿ ಹಿನ್ನೀರಿನ ಮೂಲಕ ಸಾಗಾಟ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ರೂ. ೧೫೦ ಲಕ್ಷ ಮೊತ್ತದ ನಾಟಾಗಳ ಹಾಗೂ ಸಾಗಾಟಕ್ಕೆ ಬಳಸುತ್ತಿದ್ದ ತೆಪ್ಪಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ, ಸೋಮವಾರಪೇಟೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು, ವಲಯ ಅರಣ್ಯಾಧಿಕಾರಿ ಶಮಾ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಮನು ಎಂ.ಕೆ., ಅರಣ್ಯ ರಕ್ಷಕರಾದ ಹೆಚ್.ಪಿ. ರಾಜಣ್ಣ, ಭೀಮಣ್ಣ, ಚೇತನ್, ಪ್ರಸಾದ್, ಬರಮ ತಿಮ್ಮಯ್ಯ, ಅರಣ್ಯ ವೀಕ್ಷಕರಾದ ದಿವಾಕರ್, ದೀಕ್ಷಿತ್, ಹರ್ಷಿತ್, ರವಿ, ವರುಣ್, ವಾಹನ ಚಾಲಕ ಸಂತೋಷ್ ಇದ್ದರು.