ಶನಿವಾರಸಂತೆ, ಸೆ. ೧೮: ಇಲ್ಲಿಗೆ ಸಮೀಪದ ತಪೋವನಕ್ಷೇತ್ರ ಮನೆಹಳ್ಳಿ ಮಠದಲ್ಲಿ ವೀರಭದ್ರೇಶ್ವರ ಉತ್ಸವದ ಮೂಲಕ ವೀರಭದ್ರೇಶ್ವರ ವರ್ಧಂತಿ ಮಹೋತ್ಸವ ತೆರೆಕಂಡಿತು.
ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಅಖಿಲ ಭಾರತ ವೀರಶೈವ ಮಹಾಸಭಾ, ತಪೋವನ ಕ್ಷೇತ್ರ ಮನೆಹಳ್ಳಿ ಮಠ, ವೀರಶೈವ ಲಿಂಗಾಯತ ಜಂಗಮ ಅರ್ಚಕರ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ವೀರಭದ್ರೇಶ್ವರ ಸ್ವಾಮಿ ಜನ್ಮವರ್ಧಂತಿ ಮಹೋತ್ಸವದ ಅಂಗವಾಗಿ ಮಠದ ಕ್ಷೇತ್ರ ದೈವ ವೀರಭದ್ರ ಸ್ವಾಮಿಗೆ ಬೆಳಗ್ಗಿನಿಂದಲೇ ವಿಶೇಷ ಪೂಜೆ ನಡೆಯಿತು.
ಸಂಜೆ ಅಲಂಕೃತ ವಾಹನದಲ್ಲಿ ದೇವರ ಮೂರ್ತಿಯನ್ನಿರಿಸಿ ಮಂಗಳವಾದ್ಯ ಘೋಷ, ವೀರಗಾಸೆ, ಚಾಮರ ಸೇವೆಗಳೊಂದಿಗೆ ಉತ್ಸವ ನಡೆಯಿತು.
ಮಠದ ಆವರಣದಲ್ಲಿ ನಡೆದ ವರ್ಧಂತಿ ಮಹೋತ್ಸವದ ಸಮಾರೋಪ ಸಮಾರಂಭವನ್ನು ತಾಲೂಕು ತಹಶೀಲ್ದಾರ್ ಗೋವಿಂದರಾಜು ಉದ್ಘಾಟಿಸಿ ಮಠಮಾನ್ಯಗಳಿಂದ ಸಮಾಜದಲ್ಲಿ ಸಮಾನತೆ ಸಾಧಿಸಲು ಸಾಧ್ಯವೆಂದರು.
ಇಲ್ಲಿ ಎಲ್ಲಾ ಜಾತಿ ಜನಾಂಗದವರು ಭಕ್ತರಾಗಿ ಆಗಮಿಸುವುದರಿಂದ ಅವರಲ್ಲಿ ಮೇಲುಕೀಳು ಭಾವನೆ ಬರುವುದಿಲ್ಲ ಇಲ್ಲಿ ಎಲ್ಲರೂ ಒಂದೇ ಎಂದರು. ಹಾಗೆಯೇ ವಿದ್ಯೆ, ದಾಸೋಹ ಸೇವೆಗಳಲ್ಲಿ ಮಠಗಳ ಸೇವೆ ಅವಿಸ್ಮರಣೀಯವೆಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಸವಾಪಟ್ಟಣದ ತೋಂಟದಾರ್ಯ ಸಂಸ್ಥಾನ ಮಠಾಧೀಶರಾದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಮಾತನಾಡಿ, ವೀರಭದ್ರೇಶ್ವರ ಸ್ವಾಮಿ ಕ್ಷಾತ್ರತೇಜಸ್ಸಿನ ಪ್ರತೀಕವಾಗಿದ್ದು, ಅನ್ಯಾಯ, ಅನಾಚಾರ, ಅಧರ್ಮಗಳ ವಿರುದ್ಧ ಹೋರಾಡಲು ನಮಗೆ ಪ್ರೇರಣಾದಾಯಕನಾಗಿದ್ದು ಆತನ ಅವತಾರವೇ ಅತ್ಯಂತ ವಿಸ್ಮಯ ಮತ್ತು ಪವಾಡ ಸದೃಶವಾಗಿದೆ ಎಂದರು.
ಮನೆಹಳ್ಳಿ ಮಠಾಧೀಶರಾದ ಮಹಾಂತ ಶಿವಲಿಂಗಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಈ ಸಂದರ್ಭ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಜಯದೇವ ಸ್ವಾಮೀಜಿ, ಚಿಲುಮೆಮಠ ಅರಕಲಗೂಡು, ಕಲ್ಯಾಣ ಸ್ವಾಮಿಗಳು, ಸಿದ್ಧರಾಮೇಶ್ವರ ಮಠ ತೇಜೂರು, ಬಸವರಾಜೇಂದ್ರ ಸ್ವಾಮಿಗಳು, ಸಿದ್ಧಲಿಂಗೇಶ್ವರ ವಿರಕ್ತಮಠದ ಸ್ವಾಮೀಜಿಗಳು, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಎಸ್. ಮಹೇಶ್, ವೀರಶೈವ ಮಹಾಸಭಾದ ಅಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ಶಾಂಭಶಿವಮೂರ್ತಿ, ವೀರಶೈವ ಲಿಂಗಾಯತ ಜಂಗಮ ಅರ್ಚಕ ಹಾಗೂ ಪುರೋಹಿತ ಸಂಘದ ಜಿಲ್ಲಾಧ್ಯಕ್ಷ ಮೋಹನಮೂರ್ತಿ, ಕಾರ್ಯದರ್ಶಿ ಸೋಮಶೇಖರ ಶಾಸ್ತಿç, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಖಜಾಂಚಿ ಸೋಮಪ್ಪ, ಕಾರ್ಯದರ್ಶಿ ಜಯರಾಜ್, ಕುಶಾಲನಗರ ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಹದೇವಪ್ಪ, ತಪೋವನ ಕ್ಷೇತ್ರ ಸೇವಾಮಂಡಳಿ ಕಾರ್ಯದರ್ಶಿ ಸುರೇಶ್, ಖಜಾಂಚಿ ಮಂಜುನಾಥ್ ಹಾಗೂ ಪದಾಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.
ದೇವಾಲಯದಲ್ಲಿ ವಿಶೇಷ ಪೂಜೆ, ಮಹಾಮಂಗಳಾರತಿ ನಂತರ ದಾಸೋಹ ನೆರವೇರಿತು.