ಶ್ಲಾಘನೀಯ : ಅನಿಲ್ ಎಚ್.ಟಿ.

ಶನಿವಾರಸಂತೆ, ಸೆ. ೧೮ : ರೋಟರಿ ಸಂಸ್ಥೆ ಸಮಾಜಮುಖಿ ಕೆಲಸ, ಜಾಗೃತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಮಾಡುತ್ತಿದ್ದು, ಆ ನಿಟ್ಟಿನಲ್ಲಿ ಶನಿವಾರಸಂತೆಯ ರೋಟರಿ ಸಂಸ್ಥೆ ಕೊರೊನಾ ವಾರಿಯರ್ಸ್ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ರೋಟರಿ ಜಿಲ್ಲಾ ಉಪ ರಾಜ್ಯಪಾಲ ಎಚ್.ಟಿ. ಅನಿಲ್ ಅಭಿಪ್ರಾಯಪಟ್ಟರು.

ಪಟ್ಟಣದ ಆರ್.ವಿ. ಕಲ್ಯಾಣ ಮಂಟಪದಲ್ಲಿ ರೋಟರಿ ಸಂಸ್ಥೆ ವತಿಯಿಂದ ನಡೆದ ಕೊರೊನಾ ವಾರಿಯರ್ಸ್ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೊರೊನಾ ಸಂಕಷ್ಟ ಪರಿಸ್ಥಿತಿಯಲ್ಲಿ ಇರುವ ಜನರ ಜೀವ ಉಳಿಸಲು ತಮ್ಮ ಜೀವವನ್ನೇ ಪಣಕ್ಕಿಟ್ಟು ದುಡಿಯುತ್ತಿರುವ ವೈದ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಹಾಗೂ ಶಿಕ್ಷಕರನ್ನು ಗೌರವಿಸುವುದು ಮಾತ್ರವಲ್ಲ ಸಹಕರಿಸುವುದೂ ಸಂಘ ಸಂಸ್ಥೆಗಳ ಕರ್ತವ್ಯವಾಗಿದೆ ಎಂದರು.

ಕೊರೊನಾ ವಾರಿಯರ್ಸ್ಗಳಾದ ಡಾ. ಸುಪರ್ಣಾ, ನಿವೃತ್ತ ಮುಖ್ಯ ಶಿಕ್ಷಕಿ ಸರೋಜಮ್ಮ ಹಾಗೂ ಆಶಾ ಕಾರ್ಯಕರ್ತೆ ರೂಪಾ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿನಿಯರಾದ ಜನಿತಾ ಹಾಗೂ ಲಕ್ಷಿö್ಮÃ ಅವರನ್ನು ಗೌರವಿಸಲಾಯಿತು.

ರೋಟರಿ ಸಂಸ್ಥೆ ಅಧ್ಯಕ್ಷ ಎಚ್.ಸಿ. ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಂ.ಎಸ್. ವಸಂತ್, ವಲಯ ಕಾರ್ಯದರ್ಶಿ ಎಚ್.ಎಸ್. ವಸಂತಕುಮಾರ್, ವಲಯ ಸೇನಾನಿ ಟಿ.ಆರ್. ಪುರುಷೋತ್ತಮ್, ನಿಕಟಪೂರ್ವ ಅಧ್ಯಕ್ಷ ದಿವಾಕರ್, ನಿಕಟಪೂರ್ವ ಕಾರ್ಯದರ್ಶಿ ಎ.ಡಿ. ಮೋಹನ್‌ಕುಮಾರ್, ನಿರ್ದೇಶಕಿ ಶ್ವೇತಾ ಹಾಗೂ ಸದಸ್ಯರು ಉಪಸ್ಥಿತರಿದ್ದರು.