ಚೀನಾದ ವಿದೇಶಾಂಗ ಸಚಿವರೊಂದಿಗೆ ಮಹತ್ವದ ಚರ್ಚೆ
ನವದೆಹಲಿ, ಸೆ. ೧೭: ಪೂರ್ವ ಲಡಾಖ್‌ನ ವಾಸ್ತವ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಉಳಿದಿರುವ ಸಮಸ್ಯೆಗಳ ಕುರಿತಂತೆ ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಅವರೊಂದಿಗೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಹತ್ವದ ಮಾತುಕತೆ ನಡೆಸಿದ್ದಾರೆ. ಭಾರತ-ಚೀನಾ ಗಡಿ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಚೀನಾದ ವಿದೇಶಾಂಗ ಸಚಿವ ವಾಗ್ ಯಿ ಅವರೊಂದಿಗೆ ಚರ್ಚಿಸಿದರು ಎಂದು ವಿದೇಶಾಂಗ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ. ದುಶಾಂಬೆಯಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಉಭಯ ರಾಷ್ಟçಗಳ ವಿದೇಶಾಂಗ ಸಚಿವರು, ಎಲ್‌ಎಸಿ ಗಡಿಯಲ್ಲಿರುವ ಪರಿಸ್ಥಿತಿ ಕುರಿತು ಪರಸ್ಪರ ಅಭಿಪ್ರಾಯ ವಿನಿಯಮ ಮಾಡಿಕೊಂಡರು. ಹಾಗೆಯೇ, ಬಾಕಿ ಉಳಿದಿರುವ ಸಮಸ್ಯೆಗಳ ಶೀಘ್ರದಲ್ಲೇ ಬಗೆಹರಿಸುವುದಕ್ಕಾಗಿ ಎರಡೂ ರಾಷ್ಟçಗಳ ಮಿಲಿಟರಿ ಹಾಗೂ ರಾಜತಾಂತ್ರಿಕ ಅಧಿಕಾರಿಗಳು ಭೇಟಿಯಾಗಿ ಚರ್ಚಿಸಲು ಉಭಯ ನಾಯಕರು ಒಪ್ಪಿಗೆ ಸೂಚಿಸಿದರು ಎಂದು ಹೇಳಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಸಚಿವ ಜೈಶಂಕರ್ ಅವರು, ಭಾರತ ಯಾವುದೇ ನಾಗರಿಕತೆಯ ಸಂಘರ್ಷದ ಸಿದ್ಧಾಂತವನ್ನು ಪ್ರತಿಪಾದಿಸುವುದಿಲ್ಲ. ಹಾಗೆಯೇ, ಏಷ್ಯಾದ ಒಗ್ಗಟ್ಟು ಭಾರತ-ಚೀನಾ ಸಂಬAಧಗಳ ಮಾದರಿಯ ಮೇಲೆ ಅವಲಂಬಿತವಾಗಿರುತ್ತದೆ. ಈ ನಿಟ್ಟಿನಲ್ಲಿ, ಉಭಯ ಕಡೆಯ ಮಿಲಿಟರಿ ಮತ್ತು ರಾಜತಾಂತ್ರಿಕ ಅಧಿಕಾರಿಗಳು ಮತ್ತೊಮ್ಮೆ ಭೇಟಿಯಾಗಿ ಉಳಿದ ಸಮಸ್ಯೆಗಳನ್ನು ಬೇಗನೆ ಪರಿಹರಿಸಲು ತಮ್ಮ ಚರ್ಚೆಗಳನ್ನು ಮುಂದುವರಿಸಬೇಕು ಎಂದು ವಾಂಗ್ ಯೀ ಅವರಿಗೆ ಹೇಳಿದರು ಎಂದು ಎಂ.ಇ.ಎ. ಹೇಳಿದೆ.
ಜಿ.ಎಸ್.ಟಿ. ವ್ಯಾಪ್ತಿಗೆ ಪೆಟ್ರೋಲ್-ಡೀಸೆಲ್ ಇಲ್ಲ
ನವದೆಹಲಿ, ಸೆ. ೧೭: ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ಅಡಿ ತರುವುದನ್ನು ತಿರಸ್ಕರಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಇಂದು ಉತ್ತರ ಪ್ರದೇಶದ ಲಕ್ನೋದಲ್ಲಿ ೪೫ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಲಾಯಿತು. ಕೋವಿಡ್ ಚಿಕಿತ್ಸೆಗೆ ಉಪಯೋಗವಾಗುವ ಔಷಧಿಗಳಿಗೆ ತಾ. ೩೦ ರ ತನಕ ಜಿ.ಎಸ್.ಟಿ.ಯಿಂದ ವಿನಾಯಿತಿ ನೀಡಲಾಗಿದ್ದು, ಈ ಅವಧಿಯನ್ನು ಡಿಸೆಂಬರ್ ೩೧ ರ ತನಕ ವಿಸ್ತರಿಸಲಾಗಿದೆ ಎಂಬ ಮಾಹಿತಿಯನ್ನು ಅವರು ನೀಡಿದರು. ಕ್ಯಾನ್ಸರ್ ಚಿಕಿತ್ಸೆಗೆ ಬಳಕೆಯಾಗುವ ಔಷಧಿಯ ಜಿ.ಎಸ್.ಟಿ.ಯನ್ನು ಶೇ. ೧೨ ರಿಂದ ಶೇ. ೫ಕ್ಕೆ ಇಳಿಸಲಾಗಿದೆ.
ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಅಂಗೀಕಾರ
ಬೆAಗಳೂರು, ಸೆ. ೧೭: ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಸಭಾತ್ಯಾಗದ ನಡುವೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಮತ್ತು ಕ್ಷೇತ್ರಗಳ ಪುನರ್ ವಿಂಗಡಣೆ ಅಧಿಕಾರವನ್ನು ಚುನಾವಣಾ ಆಯೋಗದಿಂದ ವಾಪಸ್ ಪಡೆಯುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕವನ್ನು ಮೇಲ್ಮನೆಯಲ್ಲಿ ಶುಕ್ರವಾರ ಅಂಗೀಕರಿಸಲಾಯಿತು. ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕವನ್ನು ವಿಧಾನ ಪರಿಷತ್‌ನಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಮಂಡಿಸಿದರು. ವಿಧೇಯಕದ ಮೇಲೆ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಮತ್ತು ಕ್ಷೇತ್ರಗಳ ಪುನರ್ ವಿಂಗಡಣೆ ಅಧಿಕಾರವನ್ನು ಚುನಾವಣಾ ಆಯೋಗದಿಂದ ವಾಪಸ್ ಪಡೆಯುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿದರು.
ಮಾಜಿ ಶಾಸಕ ಪುತ್ರನ ಪುಂಡಾಟ
ಬೆAಗಳೂರು, ಸೆ. ೧೭: ಬಿಜೆಪಿ ಮಾಜಿ ಶಾಸಕ ಮಾನಪ್ಪ ವಜ್ಜಲ್ ಮಗ ಕಾರು ಪಾರ್ಕಿಂಗ್ ವಿಚಾರಕ್ಕೆ ಪುಂಡಾಟ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ವಸಂತನಗರದ ಎಂಬಸಿ ಅಪಾರ್ಟ್ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಈ ವೇಳೆ ಉದ್ಯಮಿ ದೀಪಕ್ ರೈ ಮಗ ವಿಕ್ರಮ್ ರೈ ಮೇಲೆ ಹಲ್ಲೆ ನಡೆಸಿದ್ದಾನೆ. ಕಳೆದ ಭಾನುವಾರ ರಾತ್ರಿ ಅಪಾರ್ಟ್ಮೆಂಟ್‌ನಲ್ಲಿ ಕಾರು ಪಾರ್ಕಿಂಗ್ ವಿಚಾರಕ್ಕೆ ವಿಕ್ರಮ್ ರೈ ಮತ್ತು ಆಂಜನೇಯ ವಜ್ಜಲ್ ನಡುವೆ ಹೊಡೆದಾಟ ನಡೆದಿದೆ. ಈ ಗಲಾಟೆಯಲ್ಲಿ ವಿಕ್ರಮ್ ರೈ ಕಣ್ಣಿನ ಮೇಲ್ಭಾಗಕ್ಕೆ ಗಾಯವಾಗಿದೆ. ಈ ಪ್ರಕರಣ ಸಂಬAಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಆಂಜನೇಯ ವಜ್ಜಲ್ ಮತ್ತು ವನೀಶ್ ವಜ್ಜಲ್ ದೂರು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ವಿಕ್ರಮ್ ರೈ ಸಹ ಠಾಣೆಯಲ್ಲಿ ದೂರು ನೀಡಿದ್ದು, ಇದುವರೆಗೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿ ಮೃತದೇಹ ಪತ್ತೆ
ಬೆಂಗಳೂರು, ಸೆ. ೧೭: ಗುಂಡು ಹಾರಿಸಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಆರ್ಮಿ ಸ್ಕೂಲ್ ವಿದ್ಯಾರ್ಥಿ ೧೭ ವರ್ಷದ ರಾಹುಲ್ ಭಂಡಾರಿ ಮೃತದೇಹ ಶುಕ್ರವಾರ ಸಂಜಯನಗರ ಮುಖ್ಯರಸ್ತೆಯ ಬಸ್ ಸ್ಟಾಪ್ ಬಳಿ ಪತ್ತೆಯಾಗಿದೆ. ಘಟನಾ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಪಿ ಅನುಚೇತ್, ಬೆಳಿಗ್ಗೆ ಸದಾಶಿವನಗರ ವ್ಯಾಪ್ತಿಯಲ್ಲಿ ೧೭ ವರ್ಷದ ಯುವಕ ತಲೆಗೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದು, ಇಂಡಿಯನ್ ಏರ್‌ಫೋರ್ಸ್ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ ಎಂದರು. ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿದಾಗ ಒಂದು ಸಿಂಗಲ್ ಬುಲೆಟ್ ತಲೆಯ ಬಲಭಾಗದಿಂದ ನುಗ್ಗಿ ಎಡಭಾಗದಿಂದ ಬಿದ್ದಿದೆ. ಸ್ಥಳದಲ್ಲಿ ಇಂಡಿಯನ್ ಫ್ಯಾಕ್ಟರಿ ಮೇಡ್ ಪಿಸ್ತೂಲ್ ದೊರಕಿದೆ. ಆ ಪಿಸ್ತೂಲ್‌ಗೆ ರಾಹುಲ್ ತಂದೆಯ ಪರವಾನಗಿ ಇದೆ ಎಂದು ತಿಳಿದು ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ವಿಜ್ಞಾನಿ ಪ್ರೊ. ತನು ಪದ್ಮನಾಭನ್ ಇನ್ನಿಲ್ಲ
ಪುಣೆ, ಸೆ. ೧೭: ವಿಶ್ವ ಪ್ರಸಿದ್ಧ ಭೌತವಿಜ್ಞಾನಿ ಪ್ರೊ. ತನು ಪದ್ಮನಾಭನ್ (೬೪) ಶುಕ್ರವಾರ ನಿಧನರಾಗಿದ್ದಾರೆ. ಪುಣೆಯ ತಮ್ಮ ನಿವಾಸದಲ್ಲಿ ಇಂದು ಬೆಳಿಗ್ಗೆ ತೀವ್ರ ಹೃದಯಾಘಾತಕ್ಕೀಡಾಗಿ ಕುಸಿದುಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ. ಪುಣೆಯ ಇಂಟರ್ ಯೂನಿವರ್ಸಿಟಿ ಸೆಂಟರ್‌ನಲ್ಲಿ ಖಗೋಳಶಾಸ್ತç ಮತ್ತು ಖಗೋಳ ಭೌತಶಾಸ್ತçದಲ್ಲಿ ಪ್ರೊಫೆಸರ್ ಆಗಿದ್ದ ಪದ್ಮನಾಭನ್ ಅವರು ಕಳೆದ ತಿಂಗಳು ಕೇರಳ ಶಾಸ್ತç ಪುರಸ್ಕಾರಕ್ಕೆ ಒಳಗಾಗಿದ್ದರು. ರಾಜ್ಯದ ವಿಜ್ಞಾನಿಗಳನ್ನು ಗೌರವಿಸುವ ಕೇರಳ ಸರ್ಕಾರದ ಪ್ರಶಸ್ತಿಯಿದು.
ಸೋನು ಸೂದ್ ವಿರುದ್ಧದ ತನಿಖೆ ವಿಸ್ತರಿಸಿದ ಐಟಿ
ಮುಂಬೈ, ಸೆ. ೧೭: ಬಾಲಿವುಡ್ ನಟ, ಸಮಾಜಸೇವಕ ಸೋನು ಸೂದ್ ಅವರ ವಿರುದ್ಧದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶುಕ್ರವಾರ ತನಿಖೆಯನ್ನು ವಿಸ್ತರಿಸಿದ್ದು, ನಟನಿಗೆ ಸೇರಿದ ಮತ್ತಷ್ಟು ಪ್ರದೇಶಗಳ ಮೇಲೆ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ. ಮುಂಬೈ, ನಾಗ್ಪುರ ಮತ್ತು ಜೈಪುರದಲ್ಲಿ ಸೋನು ಸೂದ್ ಅವರಿಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ಐಟಿ ಇಲಾಖೆಯ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ. ಬುಧವಾರ ಸೂನ್ ಸೂದ್ ಅವರ ಮನೆ ಮೇಲೆ ಐಟಿ ದಾಳಿ ಆರಂಭವಾಗಿತ್ತು. ಈ ದಾಳಿ ಗುರುವಾರ ಕೂಡ ಮುಂದುವರೆದಿತ್ತು.
ಸಚಿವಾಲಯ ಪ್ರವೇಶಕ್ಕೆ ನಿಷೇಧ
ಕಾಬೂಲ್, ಸೆ. ೧೭: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬೆನ್ನಲ್ಲೇ ತಾಲಿಬಾನ್ ನಿಧಾನವಾಗಿ ತನ್ನ ಸಿದ್ಧಾಂತವನ್ನು ಅಫ್ಘಾನ್ ನಾಗರಿಕರ ಮೇಲೆ ಹೇರುತ್ತಿದ್ದು, ಇದೀಗ ಅಫ್ಘಾನ್ ಮಹಿಳಾ ಉದ್ಯೋಗಿಗಳಿಗೆ ಸಚಿವಾಲಯ ಪ್ರವೇಶಕ್ಕೆ ನಿಷೇಧ ಹೇರಿದೆ. ಅಫ್ಘಾನಿಸ್ತಾನದ ಮಹಿಳಾ ವ್ಯವಹಾರಗಳ ಸಚಿವಾಲಯದೊಳಕ್ಕೆ ಮಹಿಳಾ ಉದ್ಯೋಗಿಗಳು ಪ್ರವೇಶಿಸದಂತೆ ತಾಲಿಬಾನ್ ನಿರ್ಬಂಧ ಹೇರಿದ್ದು, ಸಚಿವಾಲಯದೊಳಕ್ಕೆ ಕೇವಲ ಪುರುಷ ಉದ್ಯೋಗಿಗಳ ಪ್ರವೇಶಕ್ಕೆ ಮಾತ್ರ ಅನುಮತಿ ಕಲ್ಪಿಸಿಕೊಟ್ಟಿರುವುದಾಗಿ ಸಚಿವಾಲಯ ತಿಳಿಸಿದೆ.