ಕಣಿವೆ, ಸೆ. ೧೬: ಇಲ್ಲಿಗೆ ಸಮೀಪದ ಚಿನ್ನೇನಹಳ್ಳಿ ಹಾಗೂ ಆರನೇ ಹೊಸಕೋಟೆ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರೈತರು ಬೆಳೆದಿದ್ದ ಜೋಳದ ಫಸಲು ಕಾಡಾನೆಗಳ ಹಾವಳಿಗೆ ತುತ್ತಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿ ರುವುದಾಗಿ ರೈತರು ದೂರಿದ್ದಾರೆ. ಮಳೆಯಾಶ್ರಿತ ಈ ಪ್ರದೇಶದಲ್ಲಿ ರೈತರು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಂತಹ ಮುಸುಕಿನ ಜೋಳ, ಮರಗೆಣಸು, ಸಿಹಿ ಗೆಣಸು ಹಾಗೂ ಶುಂಠಿ ಫಸಲನ್ನು ಅಪಾರ ಪ್ರಮಾಣ ದಲ್ಲಿ ನಾಶಪಡಿಸಿ ಹಾನಿಪಡಿಸಿವೆ.
ಚಿನ್ನೇನಹಳ್ಳಿ ಗ್ರಾಮದ ಕೃಷಿಕ ರಾಜಶೇಖರ್ ಎಂಬವರಿಗೆ ಸೇರಿದ ನಾಲ್ಕು ಎಕರೆಯಲ್ಲಿ ಜೋಳದ ಫಸಲಿಗೆ ಲಗ್ಗೆಇಟ್ಟ ಕಾಡಾನೆ ಹಿಂಡು ತಿಂದು ಮತ್ತು ತುಳಿದು ನಾಶಪಡಿಸಿದ್ದು ಇದರಿಂದ ಲಕ್ಷಾಂತರ ರೂಪಾಯಿ ಬೆಳೆಹಾನಿ ಸಂಭವಿಸಿದೆ. ಇದೇ ಮಾದರಿಯಲ್ಲಿ ಅರಣ್ಯದಂಚಿನಲ್ಲಿನ ಇನ್ನೂ ಅನೇಕ ಕೃಷಿ ಫಸಲನ್ನು ಕಾಡಾನೆಗಳು ನಾಶಪಡಿಸಿವೆ.
ಗ್ರಾಮದಲ್ಲಿ ಪ್ರತೀ ದಿನ ರಾತ್ರಿಯಾಯಿತೆಂದರೆ ಚಿನ್ನೇನಹಳ್ಳಿ ಅರಣ್ಯದಿಂದ ಗುಂಪು ಗುಂಪಾಗಿ ಧಾವಿಸಿ ಬೆಳೆಗಳಿಗೆ ಲಗ್ಗೆ ಇಡುವ ಕಾಡಾನೆಗಳ ಹಿಂಡು ನಾವು ಕಷ್ಟಪಟ್ಟು ಬೆಳೆದ ಕಾವಲು ಕಾದು ಸಂರಕ್ಷಿಸಿದ ಜೋಳದ ಫಸಲನ್ನು ತುಳಿದು ಅರ್ಧ ಹಾನಿಪಡಿಸಿದರೆ ತಿಂದು ಉಳಿದರ್ಧ ಫಸಲನ್ನು ನಾಶ ಪಡಿಸಿರುವುದಾಗಿ ರೈತ ರಾಜಶೇಖರ್ ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡರು.
ಹೀಗಾಗಿ ಅಲ್ಲಿಂದ ಬೆಳೆಗಳಿಗೆ ಲಗ್ಗೆ ಇಡುವ ಕಾಡಾನೆ ಹಿಂಡು ನೇರವಾಗಿ ಫಸಲನ್ನು ನಾಶಪಡಿಸುತ್ತಿವೆ. ಈ ಬಗ್ಗೆ ಕಳೆದ ಹತ್ತಾರು ವರ್ಷಗಳಿಂದ ಅರಣ್ಯ ಇಲಾಖೆಗೆ ನೂರಾರು ಮನವಿ ಪತ್ರಗಳನ್ನು ನೀಡಿದರೂ ಕೂಡ ರೈತರ ಅಹವಾಲು ಆಲಿಸಿ ಪರಿಹರಿಸುವಲ್ಲಿ ಅಧಿಕಾರಿಗಳು ಪ್ರಯತ್ನಿಸುತ್ತಿಲ್ಲ. ಜನಪ್ರತಿನಿಧಿಗಳು ಕೂಡ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಅರಣ್ಯಾಧಿಕಾರಿಗಳು ಕೂಡಲೇ ಅರಣ್ಯದಂಚಿನ ಈ ಗ್ರಾಮಗಳಿಗೆ ಆಗಮಿಸಿ ಕಾಡಾನೆಗಳಿಂದ ಕೃಷಿಕರು ಅನುಭವಿಸುತ್ತಿರುವ ನರಕಯಾತನೆ ಗಳನ್ನು ಖುದ್ದು ಪರಿಶೀಲಿಸಿ ಸೂಕ್ತ ಪರಿಹಾರಗಳನ್ನು ಒದಗಿಸಬೇಕೆಂದು ಇಲ್ಲಿನ ರೈತರು ಆಗ್ರಹಿಸಿದ್ದಾರೆ.