*ಗೋಣಿಕೊಪ್ಪ, ಸೆ. ೧೬: ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿ ಪರಿಶಿಷ್ಟ ವರ್ಗದ ಪಂಜರಿಯರವರ ಕುಂಜಿ ಕುಟುಂಬದ ಮೇಲಿನ ದೌರ್ಜನ್ಯವನ್ನು ಜಿಲ್ಲಾ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸಿದೆ.
ಸಂಘಟನೆಯ ಸಂಚಾಲಕ ಪರಶುರಾಮ್ ಅವರ ನೇತೃತ್ವದಲ್ಲಿ ಅಮಾಯಕ ಕುಂಜಿಯ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಮತ್ತು ಪೊನ್ನಂಪೇಟೆ ಸಮಾಜ ಕಲ್ಯಾಣ ಅಧಿಕಾರಿಗೆ ಮನವಿ ಪತ್ರವನ್ನು ಸಂಘದ ವತಿಯಿಂದ ನೀಡಲಾಗಿದೆ.
ಕುಂಜಿಯ ಕುಟುಂಬದ ಮುಗ್ಧತೆಯನ್ನು ದುರ್ಬಳಕೆ ಮಾಡಿಕೊಂಡು ಬೀದಿಗೆ ತಳ್ಳಿದ ಅಮಾಯಕ ಘಟನೆ ನಡೆದಿದೆ. ಇದು ಪರಿಶಿಷ್ಟ ವರ್ಗದವರ ಮೇಲೆ ನಡೆಯುತ್ತಿರುವ ದೌರ್ಜನ್ಯವಾಗಿದ್ದು, ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಕುಂಜಿಯ ಕುಟುಂಬಕ್ಕೆ ಸೂಕ್ತ ನ್ಯಾಯ ಮತ್ತು ರಕ್ಷಣೆ ಒದಗಿಸಿಕೊಡುವಂತೆ ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಂಬಾಡಿಯಲ್ಲಿ ೫೦ ವರ್ಷಗಳ ಹಿಂದೆ ಕುಂಜಿಯ ಅಜ್ಜನಿಗೆ ಆಂಗ್ಲೋ ಇಂಡಿಯನ್ ಕುಟುಂಬದ ವತಿಯಿಂದ ಸರ್ವೆ ನಂ. ೨೫೧/೮ರ ಜಾಗವನ್ನು ವಾಸಕ್ಕಾಗಿ ನೀಡಲಾಗಿತ್ತು. ಜಾಗದಲ್ಲಿ ಚಿಕ್ಕ ಗುಡಿಸಲು ಕಟ್ಟಿಕೊಂಡು ಹಲವು ವರ್ಷಗಳಿಂದ ವಾಸಿಸುತ್ತಾ ಬಂದ ಕುಂಜಿಯ ಕುಟುಂಬವನ್ನು ಸುಶ್ಮಾ ಎಂಬವರು ಮನೆಯಿಂದ ಹೊರ ಹಾಕಿ ಮನೆಯನ್ನು ಕೆಡವಿದಲ್ಲದೇ ಜಾತಿ ನಿಂದನೆ, ಜೀವ ಭಯವೊಡ್ಡಿ ಹಿಂಸೆಯನ್ನು ನೀಡಿದ್ದಾರೆ. ಈ ಘಟನೆಯನ್ನು ಸಂಬAಧಪಟ್ಟವರು ಗಂಭೀರವಾಗಿ ಪರಿಗಣಿಸಿ ಕುಂಜಿ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡ ಬೇಕೆಂದು ಮನವಿ ಮಾಡಿದ್ದಾರೆ.
ಜೀವ ಬೆದರಿಕೆ ಹಾಗೂ ಜಾತಿ ನಿಂಧನೆ ಬಗ್ಗೆ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡು ಅನಕ್ಷರಸ್ಥ ಮತ್ತು ಬಡಕುಟುಂಬಕ್ಕೆ ಪ್ರಾಮಾಣಿಕ ನ್ಯಾಯ ಒದಗಿಸಿಕೊಡಬೇಕೆಂದು ಈ ಸಂದರ್ಭ ತಿಳಿಸಿದರು.
ದೌರ್ಜನ್ಯಕ್ಕೆ ಒಳಗಾಗಿ ಜೀವನದಲ್ಲಿ ಹತಾಶೆಗೊಂಡಿರುವ ಕುಂಜಿಗೆ ಸೂಕ್ತ ನ್ಯಾಯ ದೊರಕದೆ ಇದ್ದಲ್ಲಿ ದಲಿತ ಸಂಘಟನೆಯ ವತಿಯಿಂದ ತೀವ್ರ ಹೋರಾಟ ನಡೆಸುವುದಾಗಿ ಈ ಸಂದರ್ಭ ಎಚ್ಚರಿಸಿದ್ದಾರೆ.
ಜಿಲ್ಲಾ ಯರವ ಒಕ್ಕೂಟದ ಗೌರವಾಧ್ಯಕ್ಷ ಪಿ.ಎಸ್. ಮುತ್ತ, ಅಧ್ಯಕ್ಷ ಶಂಕರು, ದಲಿತ ಸಂಘರ್ಷ ಸಮಿತಿ ಆಂತರಿಕ ಶಿಸ್ತು ಮತ್ತು ತರಬೇತಿ ವಿಭಾಗದ ರಜನಿಕಾಂತ್, ದಲಿತ ನೌಕರರ ಮತ್ತು ಕಾರ್ಮಿಕರ ವಿಭಾಗ ಸಂಚಾಲಕ ಹೆಚ್.ಇ. ಶಿವಕುಮಾರ್, ಸಾಂಸ್ಕöÈತಿಕ ವಿಭಾಗದ ಸಂಚಾಲಕ ಪಿ.ಜೆ. ಸುಬ್ರಮಣಿ, ಕಲಾ ಮಂಡಳಿ ಸಂಘ ಸಂಚಾಲಕ ಗಿರೀಶ್, ವಿದ್ಯಾರ್ಥಿ ಒಕ್ಕೂಟ ಸಂಚಾಲಕ ಸತೀಶ್, ಜಿಲ್ಲಾ ಖಜಾಂಚಿ ಹೆಚ್.ಎನ್. ಕುಮಾರ್ ಮಹಾದೇವ್ ಹಾಜರಿದ್ದರು.
ಈ ಕುರಿತು ತಾ. ೬ರ ‘ಶಕ್ತಿ’ಯಲ್ಲಿ ವರದಿ ಪ್ರಕಟಗೊಂಡಿತ್ತು.